ಮಡಿಕೇರಿ, ಮೇ ೨೪: ನಗರದ ಗಣಪತಿ ಬೀದಿಗೆ ಅಳವಡಿಸಿದ್ದ ವಿದ್ಯುತ್ ದೀಪ ತೆರವಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಅಳವಡಿಸಿದ ಲೈಟನ್ನು ಬಿಚ್ಚಿರುವುದು ಸರಿಯಲ್ಲ ಎಂದು, ನಗರಸಭೆ ಇಂಜಿನಿಯರ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಾಗರಿಕರು, ಮರಳಿ ಅಳವಡಿಸುವಂತೆ ಪಟ್ಟು ಹಿಡಿದರು. ಗಣಪತಿ ಬೀದಿಯ ಅಭಿವೃದ್ಧಿ ಸಹಿಸದ ಆಡಳಿತ ಪಕ್ಷ ಬಿಜೆಪಿ, ದುರುದ್ದೇಶದಿಂದ ಬೀದಿದೀಪಗಳನ್ನು ತೆಗೆಸುತ್ತಿದೆ ಎಂದು, ನಗರಸಭಾ ಸದಸ್ಯರಾದ ಮನ್ಸೂರ್ ಅಲಿ, ಅಮೀನ್ ಮೊಹಿಸಿನ್ ಮತ್ತು ಬಷೀರ್ ಆರೋಪಿಸಿದರು. ಉಳಿದ ವಾರ್ಡ್ಗಳಲ್ಲೂ ಇದೇ ರೀತಿ ಕೆಲಸ ಮಾಡಿ ತೋರಿಸಲಿ, ಅದನ್ನು ಬಿಟ್ಟು ಇರುವ ಸೌಲಭ್ಯವನ್ನು ಕಿತ್ತುಕೊಳ್ಳುವುದು ಎಷ್ಟು ಸರಿ ಎಂದು ಅವರುಗಳು ವಾದಿಸಿದರು. ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಸಣ್ಣಪುಟ್ಟ ಕಳ್ಳತನ ಪ್ರಕರಣಗಳೂ ನಡೆದಿವೆ. ಪ್ರವಾಸಿ ತಾಣಗಳಿಗೆ ಪ್ರಮುಖ ಮಾರ್ಗವಾಗಿರುವ ಗಣಪತಿ ಬೀದಿಗಾಗಿ ನಿತ್ಯ ಹಲವು ಜನರು ಸಂಚರಿಸುತ್ತಾರೆ. ಈ ಕಾರಣದಿಂದ ಇರುವ ಲೈಟ್‌ಗಳನ್ನು ತೆಗೆಯಬಾರದು ಎಂದು ನಾಗರಿಕರು ಪಟ್ಟು ಹಿಡಿದರು.
ಸ್ಥಳಕ್ಕೆ ಆಯುಕ್ತರು ಬರಬೇಕೆಂದು, ನಾಗರಿಕರು ಪಟ್ಟು ಹಿಡಿದರು. ಆಯುಕ್ತ ರಾಮದಾಸ್ ಸ್ಥಳಕ್ಕೆ ಆಗಮಿಸಿ, ಜನರ ಮನವೊಲಿಸಲು ಪ್ರಯತ್ನಿಸಿದರಾದರೂ, ಪ್ರಯೋಜನವಾಗಲಿಲ್ಲ. ಅಳವಡಿಸಿರುವ ವಿದ್ಯುತ್ ದೀಪಗಳು ಪರಸ್ಪರ ತೀರಾ ಹತ್ತಿರದಲ್ಲಿದ್ದು, ಹೆಚ್ಚುವರಿ ಲೈಟ್‌ಗಳನ್ನಷ್ಟೇ ತೆಗೆಯಲಾಗುತ್ತದೆ ಎಂದು ಆಯುಕ್ತರು ಹೇಳಿದರು. ಇದಕ್ಕೊಪ್ಪದ ನಾಗರಿಕರು, ರಾತ್ರಿ ವೇಳೆ ಸಮಸ್ಯೆಯಾಗುವುದರಿಂದ ಇನ್ನಷ್ಟು ಲೈಟ್ ಅಳವಡಿಸಿ ಎಂದು ಪ್ರತ್ಯುತ್ತರ ನೀಡಿದರು. ಈ ವೇಳೆ ನಗರಸಭೆ ಕಾರ್ಯವೈಖರಿ ವಿರುದ್ಧ ಜನರು ಘೋಷಣೆ ಕೂಗಿದರು.