ಗೋಣಿಕೊಪ್ಪ ವರದಿ, ಮೇ ೨೪: ಕೊಡಗು ಜಿಲ್ಲೆಯ ಭೌಗೋಳಿಕ ಮೂಲಕ್ಕೆ ಮಾರಕವಾಗಲಿರುವ ರೈಲ್ವೇ ಮಾರ್ಗ, ಬಹುಪಥ ಹೆದ್ದಾರಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಗೆ ವಿರೋಧಿಸಿ ನಿರಂತರ ಹೋರಾಟ ನಡೆಸುವುದಾಗಿ ಕೊಡಗು ಸಂರಕ್ಷಣಾ ವೇದಿಕೆ ಅಧ್ಯಕ್ಷ ಕರ್ನಲ್ (ನಿ), ಸಿ.ಪಿ. ಮುತ್ತಣ್ಣ ಹೇಳಿದರು.
ಕೊಡಗಿನ ಭೌಗೋಳಿಕ ಸಂರಕ್ಷಣೆ ನಮ್ಮ ಮೂಲ ಉದ್ದೇಶ. ಶಾಸಕ ಕೆ.ಜಿ. ಬೋಪಯ್ಯ ಕೂಡ ಇದನ್ನು ಬಯಸಿದಲ್ಲಿ ನಾವು ಚರ್ಚೆಗೆ ಸಿದ್ಧರಿದ್ದೇವೆ. ಕೊಡಗಿನ ಅಭಿವೃದ್ಧಿಗೆ ನಾವು ವಿರೋಧಿಸುತ್ತಿಲ್ಲ. ಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಿಸರ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿರುವ ಚೇರಂಡ ನಂದಾ ಸುಬ್ಬಯ್ಯ ಕೊಡಗಿಗೆ ಮಾರಕವಾಗಿರುವ ಸಾಕಷ್ಟು ಯೋಜನೆಗಳ ಪರ ಕಾರ್ಯನಿರ್ವಹಿಸಿದ್ದಾರೆ. ಮಾರಕ ಬರಪೊಳೆ ಯೋಜನೆಯನ್ನು ಬೆಂಬಲಿಸಿದ್ದವರು. ೪೦೦ ಕೆ. ವಿ. ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆಗೆ ಬೆಂಬಲ ನೀಡಿದ್ದರು. ಸ್ಥಳೀಯರಿಗೆ ದಿನಪೂರ್ತಿ ವಿದ್ಯುತ್ ಸೇವೆ ದೊರೆಯುತ್ತದೆ ಎಂದು ನಂಬಿಸಿದ್ದರು. ರೈತರಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಎಂದು ತಪ್ಪು ಮಾಹಿತಿ ನೀಡಿದ್ದರು. ಮಾರ್ಗ ಹಾದುಹೋಗುವ ರೈತರ ಭೂಮಿಗೆ ಪರಿಹಾರ ದೊರೆಯಬೇಕಾದರೆ ಮಾರ್ಗಕ್ಕೆ ವಿರೋಧಿಸಬಾರದು ಎಂದು ಹೆದರಿಸಿ ಯೋಜನೆ ಅನುಷ್ಠಾನಕ್ಕೆ ಪಣ ತೊಟ್ಟಿದ್ದರು. ಹೀಗೆ ಮಾರಕ ಯೋಜನೆಗಳ ಪರ ನಿಂತು ಜಿಲ್ಲೆಯ ಮೂಲಕ್ಕೆ ಧÀಕ್ಕೆಯಾಗುವಂತ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ರೈತ ತೋಟದಲ್ಲಿ ಬೇಡವಾದ ಮರಗಳನ್ನು ಮಾರಾಟ ಮಾಡಬೇಕಿದೆ. ಹೀಗೆ ತನ್ನ ತೋಟದಲ್ಲಿ ಕೂಡ ಅರಣ್ಯ ಇಲಾಖೆ ನಿಯಮಕ್ಕೆ ಬದ್ಧವಾಗಿ ಮರ ಕಡಿದು ಮಾರಾಟ ಮಾಡಲಾಗಿದೆ. ಇದನ್ನು ಅಕ್ರಮ ಎಂದು ಬಿಂಬಿಸಿ, ನಮ್ಮ ಹೋರಾಟವನ್ನು ಮೊಟಕುಗೊಳಿಸುವ ಪ್ರಯತ್ನ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ಕೋಲತAಡ ರಘು ಮಾಚಯ್ಯ ಮಾತನಾಡಿ, ಕೊಡಗಿನ ಮಣ್ಣಿನ ರಕ್ಷಣೆಗೆ ಬದ್ಧವಾಗಿದ್ದೇವೆ. ವೈಯಕ್ತಿಕ ಲಾಭಕ್ಕಾಗಿ ಜಿಲ್ಲೆಯನ್ನು ಯಾರೋ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ತಪ್ಪು. ಈಗಿನ ಪೀಳಿಗೆ ಭೂ ಮಾರಾಟದಲ್ಲಿ ತೊಡಗಿಕೊಂಡಿರುವುದನ್ನು ಅವರು ಪ್ರಶ್ನಿಸಲಿ ಎಂದರು.
ಗೋಷ್ಠಿಯಲ್ಲಿ ಕೊಡಗು ಸಂರಕ್ಷಣಾ ವೇದಿಕೆ ಸದಸ್ಯರಾದ ತ್ರಿಶೂಲ್ ತಿಮ್ಮಯ್ಯ, ಮಲ್ಚೀರ ಶಾನ್ ಇದ್ದರು.