*ಗೋಣಿಕೊಪ್ಪ, ಮೇ ೨೪: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ಗೊಂಡಿರುವ ಗ್ರಂಥಾಲಯ ಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಫಲಿತಾಂಶ ಹೊಂದುವ ಸುಲಭ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ ಬೋಪಯ್ಯ ಅವರು ತಿಳಿಸಿದರು.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯಿತಿ ಪೊನ್ನಂಪೇಟೆ, ಶಿಕ್ಷಣ ಫೌಂಡೇಷನ್ ಸಹಭಾಗಿತ್ವದಲ್ಲಿ ನಡೆದ “ಗ್ರಾಮ ಡಿಜಿ ವಿಕಾಸನ” ಕಾರ್ಯಕ್ರಮದಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಗಳಿಗೆ ಟಿ.ವಿ. ಹಾಗೂ ಮೊಬೈಲ್ ಗಳನ್ನು ವಿತರಿಸಿ ಮಾತನಾಡಿದರು.

ದೇಶ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಡಿಜಿಟಲೀಕರಣ ಗೊಳ್ಳುತ್ತಿದೆ. ಅದರಲ್ಲಿ ಓದು ಕೂಡ ಆ ಹಾದಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ ವಿದ್ಯಾರ್ಥಿಗಳು ಈ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ, ಹೊಸೂರು, ಮಾಲ್ದಾರೆ, ತಿತಿಮತಿ, ಆರ್ಜಿ, ಟಿ. ಶೆಟ್ಟಿಗೇರಿ, ಬಿಳುಗುಂದ ಸೇರಿದಂತೆ ಆಯ್ದ ಹತ್ತು ಪಂಚಾಯಿತಿಗಳಿಗೆ ಮೊದಲ ಹಂತವಾಗಿ ಟಿ.ವಿ ಮತ್ತು ಮೊಬೈಲ್‌ಗಳನ್ನು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷಿö್ಮ ಅವರು ಶಾಸಕರೊಂದಿಗೆ ವಿತರಿಸಿ ಕಾರ್ಯಕ್ರಮದ ಸದುದ್ದೇಶವನ್ನು ತಿಳಿಸಿದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಉಪಸ್ಥಿತಿಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಗ್ರಂಥಾಲಯ ಮೇಲ್ವಿಚಾರಕರು ಹಾಜರಿದ್ದರು.