ಮಡಿಕೇರಿ, ಮೇ ೨೩: ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಆರಂಭಿಸಲಾಗಿರುವ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮೈಸೂರು ಶಾಖಾಮಠದ ಗುರುಗಳಾದ ಸೋಮನಾಥೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಎಲ್. ಕೆ.ಜಿ ಯಿಂದ ೮ನೇ ತರಗತಿವರೆಗಿನ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ, ನೂತನವಾಗಿ ನಿರ್ಮಿಸಲಾಗಿರುವ ಕೊಠಡಿಗಳ ಉದ್ಘಾಟನೆ ಹಾಗೂ ಎಲ್.ಕೆ.ಜಿ ಮತ್ತು ಯುಕೆಜಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಸ್ವಾಮೀಜಿ ನೆರವೇರಿಸಿದರು.
ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಗ್ರಾಮಸ್ಥರಿಗೆ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು. ವೇದಿಕೆಯಲ್ಲಿ ಮದೆ ಮಹೇಶ್ವರ ವಿದ್ಯಾ ಸಂಸ್ಥೆಯ ಸಂಚಾಲಕ ಹುದೇರಿ ರಾಜೇಂದ್ರ, ವಿದ್ಯಾಸಂಸ್ಥೆ ಸಮಿತಿಯ ಸದಸ್ಯರುಗಳಾದ ಬಿ.ಸಿ ಚೆನ್ನಪ್ಪ, ಮುಕ್ಕಾಟಿ ಲೋಬಯ್ಯ, ಹುಲಿಮನೆ ರಾಮಯ್ಯ, ಮದೆ ಮಹೇಶ್ವರ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಬಿ.ಆರ್. ಜೋಯಪ್ಪ, ಬಿ.ಜಿ.ಎಸ್ ಟ್ರಸ್ಟ್ನ ಹುಣಸೂರು ರಾಮಕೃಷ್ಣ ಗೌಡರು, ಉದ್ಯಮಿ ಮುದ್ಯನ ಕಿಶನ್, ಭಾಗಮಂಡಲ ಕಾವೇರಿ ಕಾಲೇಜಿನ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ ಉಪಸ್ಥಿತರಿದ್ದರು.