ನಾಪೋಕ್ಲು, ಮೇ ೨೧: ಮರದ ಕೊಂಬೆ ಕಡಿಯುವ ಸಂದರ್ಭ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಮರದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ನಡೆದಿದೆ.
ಕಕ್ಕಬೆ ಮರಂದೋಡ ನಿವಾಸಿ ಆಚಾರಿ ರುದ್ರಪ್ಪ (೬೫) ಮೃತ ದುರ್ಧೈವಿ. ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ಬಳಿ ಹಾದುಹೋಗಿರುವ ಮರದ ಕೊಂಬೆಗಳನ್ನು ಕಡಿಯಲು ರುದ್ರಪ್ಪ ಅವರಿಗೆ ಕೆಲಸ ಒಪ್ಪಿಸಿದ್ದರು. ಅದರಂತೆ ಚೆಸ್ಕಾಂ ಸಿಬ್ಬಂದಿಗಳ ಜೊತೆ ತೋಟವೊಂದರಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ಏಣಿಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಮರದಿಂದ ಕೆಳಗೆ ಬಿದ್ದ ಕಾರ್ಮಿಕ ಸ್ಥಳದಲ್ಲಿಯೇ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತರ ಕುಟುಂಬಕ್ಕೆ ನೆರವು ನೀಡುವುದಾಗಿ ಚೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.