ಕಾರು, ಮನೆಗಳ ಮೇಲೆ ದಾಳಿ

ಮಡಿಕೇರಿ, ಮೇ ೨೦: ಹಸುವೊಂದು ಅಸ್ವಸ್ಥಗೊಂಡು ದಾಂಧಲೆ ನಡೆಸಿದ್ದು, ರೇಬಿಸ್ ನಿಂದ ಈ ರೀತಿ ಮಾಡಿದೆ ಎಂದು ಶಂಕಿಸಲಾಗಿದೆ.

ಇಬ್ನಿವಳವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಸುವೊಂದು ದಿಢೀರನೆ ಎಲ್ಲರ ಮೇಲೆ ಗುದ್ದಲು ಬಂದಿದೆ. ಈ ಸಂದರ್ಭ ಅಲ್ಲಿನ ಗ್ರಾಮಸ್ಥರು ಗಾಬರಿಗೊಂಡು ಮನೆಯೊಳಗೆ ಓಡಿದ್ದಾರೆ. ನಂತರ ಅಲ್ಲಿ ನಿಲುಗಡೆಗೊಂಡಿದ್ದ ಕಾರಿಗೆ ಹಾನಿಪಡಿಸಿದ್ದಲ್ಲದೆ ಗೂಡಿನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ತುಳಿದು ಕೊಂದು ಹಾಕಿದೆ. ಕೆಲ ಮನೆಗಳ ಮೇಲೂ ದಾಳಿ ಮಾಡಿದೆ. ಮದವೇರಿದ ರೀತಿಯಲ್ಲಿ ದಾಳಿ ನಡೆಸಿದ ಪರಿಣಾಮ ಹಸುವಿನ ಕೊಂಬು ಮುರಿದಿದೆ.

ಸ್ಥಳೀಯರು ಪಶುಪಾಲನಾ ಇಲಾಖೆ ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ ಆಧಾರದಲ್ಲಿ ಹಸುವಿಗೆ ಹುಚ್ಚುನಾಯಿ ಕಚ್ಚಿ ರೇಬಿಸ್ ಹರಡಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.

ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳಿಗೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ನಂತರ ಸ್ಥಳೀಯರೆ ನಿರಂತರ ೪ ಗಂಟೆ ಕಾರ್ಯಾಚರಣೆ ನಡೆಸಿ ಹಗ್ಗದ ಸಹಾಯದಿಂದ ಹಸುವನ್ನು ಕಟ್ಟಿ ಹಾಕಿದ್ದಾರೆ.