ಪ್ರತಿ ವರ್ಷ ಮೇ ೨೨ ರಂದು ವಿಶ್ವ ಜೀವ - ವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ.

ಪರಿಸರದಲ್ಲಿನ ಜೈವಿಕ ಸಂಪನ್ಮೂಲಗಳನ್ನು ರಕ್ಷಿಸುವ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ದಿಸೆಯಲ್ಲಿ ಹಾಗೂ ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವಸಂಸ್ಥೆಯು ಈ ದಿನವನ್ನು ಮುಡಿಪಾಗಿಟ್ಟಿದೆ. ಜಾಗತಿಕವಾಗಿ ಪರಿಸರ ವ್ಯವಸ್ಥೆಯಲ್ಲಿ ನಾವು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜೀವ ವೈವಿಧ್ಯ ಸಂರಕ್ಷಣೆಯು ಅತ್ಯಂತ ಪ್ರಸ್ತುತವಾಗಿದೆ.

ಜೀವ ವೈವಿಧ್ಯಕ್ಕೆ ಧಕ್ಕೆಯಾದಾಗ, ಹವಾಮಾನ ಬದಲಾವಣೆಯು ಒಂದು ಪ್ರಮುಖ ಬೆದರಿಕೆಯಾಗಿ ಉಳಿದಿದೆ. ಆದರೂ, ಮಾನವ ಸೇರಿದಂತೆ ಸಕಲ ಜೀವಿಗಳ ಉಳಿವಿಗೆ ಜೀವವೈವಿಧ್ಯವು ಅತ್ಯಗತ್ಯ ಎಂಬ ವಾಸ್ತವದ ಹೊರತಾಗಿಯೂ, ಅದರ ದೊಡ್ಡ ಬೆದರಿಕೆಗೆ ಮಾನವರಾದ ನಾವೇ ಜವಾಬ್ದಾರರು ಎಂಬುದನ್ನು ನಾವು ಮನಗಾಣಬೇಕಿದೆ.

೧೯೯೨ ಮೇ ೨೨ ರಂದು ನೈಬೋರಿಯ ಯು.ಎನ್.ಇ.ಪಿ. (U.ಓ.ಇ.P.) ಪ್ರಧಾನ ಕಚೇರಿಯಲ್ಲಿ ಜೈವಿಕ ವೈವಿಧ್ಯದ ಒಪ್ಪಂದವನ್ನು ಅಳವಡಿಸಿಕೊಳ್ಳಲಾಯಿತು. ವಿಸ್ಮಯಗಳ ತವರೂರಾದ ಧರಿತ್ರಿಯಲ್ಲಿ ಅಗಣಿತವಾದ ಜೀವ-ಸಂಕುಲಗಳು ಜನ್ಮವೆತ್ತಿವೆ. ಇದೇ ನಮ್ಮ ಜೀವ-ವೈವಿಧ್ಯದ ತಾಣ. ಈ ಪ್ರಕೃತಿಯ ಸಂಪನ್ಮೂಲಗಳು, ಸಸ್ಯ, ಪ್ರಾಣಿ ಹಾಗೂ ಜೀವಿ ಸಂಕುಲಗಳ ಸೊಬಗನ್ನು ನೆನಪಿಸಿ, ಸಂರಕ್ಷಣೆಗೆ ಪಣತೊಡುವ ದಿನವೇ ಜೀವ ವೈವಿಧ್ಯ ದಿನವಾಗಿದೆ.

ಜೀವ ವೈವಿಧ್ಯ ಸಂರಕ್ಷಣೆ

ಜೀವ ವೈವಿಧ್ಯವನ್ನು ಸಂರಕ್ಷಿಸುವುದು ಎಂದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಕಾಪಾಡುವುದು. ಅದಕ್ಕೆಂದೇ ನಾವು ನಮ್ಮ ಅರಣ್ಯ ಮತ್ತು ಸಮುದ್ರವನ್ನು ರಕ್ಷಿಸಬೇಕಿದೆ. ಯಾವುದೇ ಜೀವ ಸಂಕುಲ ಅಳಿವಿನಂಚಿಗೆ ಹೋಗುವುದನ್ನು ತಡೆಗಟ್ಟುವುದು ನಮ್ಮ ಗುರುತರ ಜವಾಬ್ದಾರಿಯಾಗಿದೆ.

ಅಂದರೆ ನಾವು ನಿಸರ್ಗವನ್ನು ಆರೋಗ್ಯಕರವಾಗಿಟ್ಟುಕೊಂಡರೆ, ಅದು ನಮ್ಮ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲಿದೆ. ಅಂದರೆ, ಜೀವ ವೈವಿಧ್ಯವನ್ನು ನಾಶಪಡಿಸಿ ನಡೆಸುವ ಅಭಿವೃದ್ಧಿ ಎಂದರೆ ಅದು ಅಭಿವೃದ್ಧಿಯೇ ಅಲ್ಲ. ಅದರಿಂದ ದೀರ್ಘಕಾಲಿಕವಾಗಿ ನಾಶವೇ ಖಚಿತ. ಇದರಿಂದ ನಾವು ತಿಳಿದುಕೊಳ್ಳಬೇಕಾದುದು ಏನೆಂದರೆ, ಪ್ರಕೃತಿಯ ಜೀವ ವೈವಿಧ್ಯದ ಮೇಲೆ ಮನುಷ್ಯ ನಡೆಸುವ ಆಕ್ರಮಣ, ಅವನನ್ನೇ ನಾಶ ಮಾಡುತ್ತದೆ ಎಂಬುದನ್ನು ನಾವು ಮನಗಾಣಬಹುದಾಗಿದೆ.

ಜೀವ ಸರಪಳಿ

ನಾವು ‘ಇನ್ನಾದರೂ ನಮ್ಮ ಜೀವ ವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಉಳಿಸಲು ಪಣ ತೊಡದಿದ್ದಲ್ಲಿ ಮಾನವ ಜೀವಿ ಕೂಡ ಸರ್ವ ನಾಶವಾಗುವ ದಿನಗಳು ದೂರವಿಲ್ಲ’ ಎಂಬ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ಜೀವ ವೈವಿಧ್ಯವನ್ನು ಕಾಪಾಡುವ, ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ನಾವು ಬದ್ಧರಾಗಬೇಕಿದೆ. ಜೀವ ವೈವಿಧ್ಯತೆಯ ವಿನಾಶವನ್ನು ಕಡಿಮೆ ಮಾಡಿ ಉತ್ತೇಜಿಸಲು ಕಳೆದ ದಶಕವನ್ನು ಜೀವ ವೈವಿಧ್ಯತೆ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.

ಜೀವ ವೈವಿಧ್ಯತೆಯು ‘ಒಂದು ಪ್ರದೇಶದ ಜೀನ್‌ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳ ಸಂಪೂರ್ಣತೆ’ಯನ್ನು ಉಲ್ಲೇಖಿಸುತ್ತದೆ. ಜೀವ ವೈವಿಧ್ಯತೆಯಲ್ಲಿ ಮೂರು ಹಂತಗಳಿವೆ. ಪ್ರಭೇದ ವೈವಿಧ್ಯತೆ, ಪರಿಸರ ವೈವಿಧ್ಯತೆ ಮತ್ತು ತಳಿ ವೈವಿಧ್ಯತೆ, ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ, ಆವಾಸಸ್ಥಾನಗಳ ನಾಶ, ಆಕ್ರಮಣಶೀಲ ಜಾತಿಗಳು, ಅನುವಂಶಿಕ ಮಾಲಿನ್ಯ, ಶೋಷಣೆ ಮತ್ತು ಪರಿಣಾಮಗಳು ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೀವವೈವಿಧ್ಯತೆ ಪದವನ್ನು ಬಳಸಲಾಗುತ್ತದೆ.

ನೆಲ, ಜಲ, ವಾಯು ಮಾಲಿನ್ಯದಿಂದ ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ.

ನಿಸರ್ಗದಲ್ಲಿ ಜೀವಿ ಪರಿಸರ ವ್ಯವಸ್ಥೆಯ ಕೊಂಡಿಯಾದ ಜೇನು ನೊಣಗಳು ಸೇರಿದಂತೆ ಸೂಕ್ಷಾö್ಮಣು ಜೀವಿಗಳು ನಿರ್ನಾಮವಾದರೆ ನಾವು ಆಹಾರಕ್ಕಾಗಿ ಪರದಾಡಬೇಕಾಗುತ್ತದೆ. ಹೀಗೆ ಜೀವಿಗಳ ಸಂತತಿ ನಾಶವಾಗದಂತೆ ನಾವು ನಿಸರ್ಗದಲ್ಲಿರುವ ಪ್ರತಿಯೊಂದು ಸೂಕ್ಷö್ಮಜೀವಿಗಳ ಸಂತತಿಯ ಉಳಿಸಬೇಕಿದೆ.

ನಾವು ಭವಿಷ್ಯತ್ತಿನ ದೃಷ್ಠಿಯಲ್ಲಿ ಹಾಗೂ ಉತ್ತಮ ಜೀವ ವೈವಿಧ್ಯ ಸಂರಕ್ಷಣೆಗಾಗಿ ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ವೈವಿಧ್ಯ ಸಂರಕ್ಷಣೆಗೆ ಪಣತೊಡಬೇಕಿದೆ.

- ಟಿ.ಜಿ. ಪ್ರೇಮಕುಮಾರ್, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು, ಮೊ. ೯೪೪೮೫ ೮೮೩೫೨