ಶನಿವಾರಸಂತೆ, ಮೇ ೨೦: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದ ಕೂಲಿ ಕಾರ್ಮಿಕ ಧರ್ಮಯ್ಯ - ದೇವಮ್ಮ ದಂಪತಿಯ ಮನೆ ಒಳಗಡೆ ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನೆಲೆ ನೀರು ತುಂಬಿ ವಾಸಿಸಲು ತೊಂದರೆಯಾಗಿದ್ದು, ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಜುಲೈ ತಿಂಗಳ ಭಾರೀ ಮಳೆಗೆ ಧರ್ಮಯ್ಯನವರ ಮನೆ ಬಿದ್ದು ಹೋಗಿತ್ತು. ಸರ್ಕಾರದಿಂದ ಯಾವುದೇ ಪರಿಹಾರ ಸಿಗಲಿಲ್ಲ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದಂಪತಿ ಅಳಲು ತೋಡಿಕೊಳ್ಳುತ್ತಾರೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ದಂಪತಿ ಸ್ವಂತ ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿಯವರು ಸ್ಥಳ ಪರಿಶೀಲನೆ ಮಾಡಿ ಧರ್ಮಯ್ಯ - ದೇವಮ್ಮ ದಂಪತಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಪಂಚಾಯಿತಿ ಮಾಜಿ ಸದಸ್ಯ ಡಿ.ಆರ್. ವೇದಕುಮಾರ್ ಆಗ್ರಹಿಸಿದ್ದಾರೆ.