ಮಡಿಕೇರಿ, ಮೇ 19: ಭಜರಂಗದಳದ ವತಿಯಿಂದ ಪೊನ್ನಂಪೇಟೆ ಸಾಯಿಶಂಕರ ಶಾಲಾ ಆವರಣದಲ್ಲಿ ಪ್ರಶಿಕ್ಷಣ ವರ್ಗ ಶಿಬಿರ ನಡೆದಿರುವುದು ಸತ್ಯಸಂಗತಿ. ಆದರೆ ಶಸ್ತ್ರಾಸ್ತ್ರ ತರಬೇತಿ ಶಾಲಾ ಆವರಣದಲ್ಲಿ ನಡೆದಿಲ್ಲ. ಶಾಲೆಯಿಂದ ಹೊರ ಭಾಗದಲ್ಲಿರುವ ಶಾಲೆಗೆ ಸಂಬಂಧಿಸಿದ ಜಾಗದಲ್ಲಿ ತರಬೇತಿ ನಡೆದಿದ್ದು, ಸಾಯಿಶಂಕರ ಶಾಲಾ ಆವರಣದಲ್ಲಿ ಅಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಝರುಗಣಪತಿ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾಯಿಶಂಕರ ಶಾಲೆಯನ್ನು ರಜೆಯ ಸಂದರ್ಭ ವಿವಿಧ ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಕಳೆದ ಹಲವು ವರ್ಷಗಳಿಂದ ಅವಕಾಶ ನೀಡಲಾಗುತ್ತಿದೆ. ಅದರಂತೆ ಈ ಬಾರಿ ಭಜರಂಗದಳದ ಪ್ರಶಿಕ್ಷಣ ವರ್ಗದ ಶಿಬಿರಕ್ಕೂ ಶಾಲೆಗೆ ರಜೆ ಇದ್ದ ಕಾರಣ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಆ ಶಿಬಿರದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ; ತ್ರಿಶೂಲ ದೀಕ್ಷೆ ನಡೆದಿದೆ ಎಂದು ಹಲವರು ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ಲಾಭಕ್ಕಾಗಿ ವಿದ್ಯಾಸಂಸ್ಥೆಯನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಹೇಳಿದರು. ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ಚಿತ್ರವೊಂದು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಆ ಚಿತ್ರದಲ್ಲಿರುವ ಜಾಗ ಸಾಯಿಶಂಕರ ಶಾಲಾ ಆವರಣವಲ್ಲ.
(ಮೊದಲ ಪುಟದಿಂದ) ಶಾಲೆಯಿಂದ ಹೊರ ಭಾಗದಲ್ಲಿರುವ ಸ್ಥಳವೊಂದರ ಚಿತ್ರ ಅದಾಗಿದ್ದು, ಆರೋಪ ಮಾಡುವವರು ಬಂದಲ್ಲಿ ತಾನೇ ಆ ಜಾಗವನ್ನು ತೋರಿಸುತ್ತೇನೆ ಎಂದು ಝರುಗಣಪತಿ ನುಡಿದರು. ಅಧ್ಯಾತ್ಮದ ನೆಲೆಯಲ್ಲಿ ಸಾಯಿಶಂಕರ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಎಲ್ಲಾ ಧರ್ಮಗಳ ಮಕ್ಕಳು, ಶಿಕ್ಷಕರಿದ್ದಾರೆ. ತಾನು ಖಾಸಗಿ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿದ್ದು, ಎಲ್ಲಾ ಧರ್ಮಗಳ ಶಾಲೆಗಳು ಸಮಿತಿಯಲ್ಲಿದೆ. ನಾವೆಲ್ಲರೂ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಿರುವಾಗ ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಝರು ಗಣಪತಿ ವಿಷಾಧಿಸಿದರು.
ಮತ್ತೊಂದೆಡೆ ಶಿಬಿರದಲ್ಲಿ ತ್ರಿಶೂಲ ದೀಕ್ಷೆ ನಡೆದಿದೆ ಎಂದು ಆರೋಪಿಸಲಾಗುತ್ತಿದ್ದು, ಯಾವುದೇ ದೀಕ್ಷೆ ನಡೆದಿಲ್ಲ. ಶಿಬಿರದ ಕೊನೆಯ ದಿನ ಬಿಳಿಲೋಹದ ತ್ರಿಶೂಲವೊಂದನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿಳಿಸಿದ ಝರುಗಣಪತಿ ಅದನ್ನು ಪ್ರದರ್ಶಿಸಿದರು. ಭಜರಂಗದಳದ ಶಿಬಿರದಲ್ಲಿ ಸಾಯಿಶಂಕರ ಶಾಲೆಯ ಯಾವೊಬ್ಬ ವಿದ್ಯಾರ್ಥಿಯಾಗಲಿ, ಸಿಬ್ಬಂದಿಯಾಗಲಿ ಪಾಲ್ಗೊಂಡಿರಲಿಲ್ಲ.
2018ರ ಜಲಪ್ರಳಯ ಸಂದರ್ಭ 140 ಮಕ್ಕಳನ್ನು ಶಾಲೆ ವತಿಯಿಂದ ದತ್ತು ತೆಗೆದುಕೊಂಡು ಪೋಷಿಸಲಾಗಿದೆ. ಇಂತಹ ಸಂಸ್ಥೆಯಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆದಿದೆ ಎಂದು ಆರೋಪ ಮಾಡುವವರು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು. ಸ್ವಾರ್ಥಕ್ಕಾಗಿ ವಿದ್ಯಾಸಂಸ್ಥೆಯನ್ನು ಯಾರೂ ಕೂಡ ಬಲಿಕೊಡಬಾರ ದೆಂದು ಝರುಗಣಪತಿ ಹೇಳಿದರು.
ವಿದ್ಯಾಸಂಸ್ಥೆಯ ನಿರ್ದೇಶಕ ಸತೀಶ್ ದೇವಯ್ಯ ಮಾತನಾಡಿ, ವಾಸ್ತವ ಏನೆಂಬುದನ್ನು ತಿಳಿದುಕೊಳ್ಳದೆ ವಿದ್ಯಾಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಕುಪ್ಪಂಡ ರೀನಾ ಗಣೇಶ್, ಟ್ರಸ್ಟಿ ಕೋಳೇರ ಗಾನ ಕಾರ್ಯಪ್ಪ ಉಪಸ್ಥಿತರಿದ್ದರು.