ವೀರಾಜಪೇಟೆ, ಮೇ ೧೮: ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ತಾ. ೧೯ ರಂದು (ಇಂದು) ಆಯೋಜಿಸಲಾಗಿರುವ ಹಿಂದೂ ಜನ ಜಾಗೃತಿ ಸಮಾವೇಶ ಹಾಗೂ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣವು ಕೇಸರಿ ಬಣ್ಣದಿಂದ ಕಂಗೊಳಿಸುತ್ತಿದೆ. ಪಟ್ಟಣದ ಮುಖ್ಯ ಬೀದಿಗಳನ್ನು ಕೇಸರಿ ತೋರಣಗಳಿಂದ ಶೃಂಗರಿಸಲಾಗಿದೆ. ಸಮಾವೇಶಕ್ಕೆ ಸುಮಾರು ೩ ರಿಂದ ೪ ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಆದರೆ ಸುರಿಯುತ್ತಿರುವ ಮಳೆಯ ಕಾರಣದಿಂದ ಕಾರ್ಯಕ್ರಮಕ್ಕೆ ಸ್ವಲ್ಪ ಅಡಚಣೆ ಆಗಬಹುದು ಎನ್ನುವ ಆತಂಕ ಕೂಡ ಮನೆಮಾಡಿದೆ.
ಮದ್ಯ ಮಾರಾಟ ನಿಷೇಧ
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ ೧೯೬೫ ರ ಕಲಂ ೨೧ ರಲ್ಲಿ ದತ್ತವಾಗಿರುವ ಅಧಿಕಾರದಂತೆ ಮೇ. ೧೮ ರ ಮಧ್ಯರಾತ್ರಿ ೧೨ ಗಂಟೆಯಿAದ ಮೇ, ೧೯ ರ ಮಧ್ಯರಾತ್ರಿ ೧೨ ಗಂಟೆಯವರೆಗೆ ವೀರಾಜಪೇಟೆ ನಗರದ ೧೦ ಕಿ.ಮೀ. ಸುತ್ತಮುತ್ತ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಗ ಮತ್ತು ಅಮ್ಮತ್ತಿ ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್ ಮತ್ತು ಕ್ಲಬ್ಗಳಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.
ವಾಹನ ನಿಲುಗಡೆ ನಿಷೇಧ
ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ನಗರದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿಚೌಕಿ, ಎಫ್.ಎಂ.ಸಿ ರಸ್ತೆ ಗಡಿಯಾರ ಕಂಭ, ಮುಖ್ಯ ರಸ್ತೆ, ಮಲಬಾರ್ ರಸ್ತೆ (ಮೀನು ಪೇಟೆ)ಖಾಸಗಿ ಬಸ್ ನಿಲ್ದಾಣ, ಅಬ್ದುಲ್ ಕಲಾಂ ರಸ್ತೆ, ಗೋಣಿಕೊಪ್ಪ ರಸ್ತೆಯಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ಇಲ್ಲ ಎಂದು ವೀರಾಜಪೇಟೆ ಪೊಲೀಸ್ ವೃತ್ತನಿರೀಕ್ಷಕ ಶಿವರುದ್ರಪ್ಪ ಮಾಹಿತಿ ನೀಡಿದ್ದಾರೆ. ಎಲ್ಲೆಡೆ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರ ನಿರ್ದೇಶನದಂತೆ ವೀರಾಜಪೇಟೆ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.