ವೀರಾಜಪೇಟೆ, ಮೇ ೧೮: ಪ್ರಕೃತಿ ವಿಕೋಪ ತಡೆಯುವ ನಿಟ್ಟಿನಲ್ಲಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಗಳ ಸಭೆ ನಡೆದಿದ್ದು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡಲು ಶಾಸಕರು ಸ್ಥಳದಲ್ಲಿಯೇ ಸೂಚಿಸಿದರು.
ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮಕೈಗೊಳ್ಳಲು ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗೈರು ಹಾಜರಾದ ವೀರಾಜಪೇಟೆ ಅರಣ್ಯ ಇಲಾಖೆಯ ಎ.ಸಿ.ಎಫ್. ಮತ್ತು ಪೊನ್ನಂಪೇಟೆ ಸೆಸ್ಕ್ ಎ.ಇ ಅವರಿಗೆ ನೋಟೀಸ್ ಜಾರಿ ಮಾಡಲು ಹಾಗೂ ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಶಾಸಕ ಬೋಪಯ್ಯ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಸೂಚಿಸಿದರು.
ಪೂರ್ವಭಾವಿ ಸಭೆಯಲ್ಲಿ ಶಾಸಕರು ಅಧಿಕಾರಿಗಳ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಬೇಜವಾಬ್ದಾರಿ ಸರಿಯಲ್ಲ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸೆಸ್ಕ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಮಾಹಿತಿ ನೀಡಿ ಇಲಾಖೆಯಲ್ಲಿ ಅಂದಾಜು ಐವತ್ತು ವಿದ್ಯುತ್ ಕಂಬ ದಾಸ್ತಾನು ಇಡಲಾಗಿದ್ದು, ಬಿಟ್ಟಂಗಾಲ ಗ್ರಾಮದಲ್ಲಿ ಕಂಬಗಳ ತಯಾರಿಕಾ ಘಟಕದಿಂದ ಆಗತ್ಯ ಕಂಬ ಪಡೆಯಲಾಗುತ್ತದೆ. ೪೩ ಸಿಬ್ಬಂದಿಗಳಿದ್ದು, ಮಳೆ ದಿನದಲ್ಲಿ ಹೆಚ್ಚಿನ ಸಿಬ್ಬಂದಿ ಆಗತ್ಯವಿದೆ ಎಂದರು. ಕಳೆದ ಸಾಲಿನಲ್ಲಿ ನಮ್ಮ ಭಾಗಕ್ಕೆ ೨೫ ಜನ ಸಿಬ್ಬಂದಿಯನ್ನು ನೀಡಲಾಗಿತ್ತು, ಈ ಬಾರಿಯೂ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಶಾಸಕ ಬೋಪಯ್ಯ ಲೋಕೋಪಯೋಗಿ ಸಹಾಯಕ ಅಭಿಯಂತರ ಸಿದ್ದೆಗೌಡ ಅವರಿಗೆ ಮಳೆ ದಿನದಲ್ಲಿ ಮರಗಳು ರಸ್ತೆಗೆ ಬಿದ್ದಾಗ ಅರಣ್ಯ ಇಲಾಖೆ ಜೊತೆಗೂಡಿ ತಕ್ಷಣ ತೆರವಿಗೆ ಮುಂದಾಗಬೆಕು. ರಸ್ತೆ ಸಂಚಾರ ಮುಕ್ತವಾಗಿರುವಂತೆ ನೋಡಿ ಕೊಳ್ಳಬೇಕು ಎಂದು ಸೂಚಿಸಿದರು. ಅದೇ ರೀತಿ ಜಿ.ಪಂ. ತಾಂತ್ರಿಕ ವಿಭಾಗದವರು ಸಹ ಗ್ರಾಮೀಣ ರಸ್ತೆಗಳ ಬಗ್ಗೆ ಆಗತ್ಯ ಕ್ರಮಕೈಗೊಳ್ಳಬೇಕು ಎಂದು ಅಭಿಯಂತರ ಮಹಾದೇವ ಅವರಿಗೆ ಶಾಸಕ ಬೋಪಯ್ಯ ಸೂಚಿಸಿದರು.
ಪ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್ ಮಾಹಿತಿ ನೀಡಿ, ಪ.ಪಂ. ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕ್ಕೆ ಅರಣ್ಯ, ಸೆಸ್ಕ್ ಮತ್ತಿತರ ಇಲಾಖೆಯ ಸಭೆ ಕರೆದು ಸಕಾಲದಲ್ಲಿ ಆಗತ್ಯ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದರು.
ಈ ಸಂದರ್ಭ ಶಾಸಕ ಬೋಪಯ್ಯ ಪೊಲೀಸ್ ಇಲಾಖೆ ೨೪ ಗಂಟೆ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಬೇಕು. ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಬೇಕು ಎಂದು ಡಿವೈಎಸ್ ಪಿ. ರಂಜನ್ ರಾಜೇ ಅರಸ್ ಅವರಿಗೆ ಸೂಚಿಸಿದರು. ಅಲ್ಲದೆ ಅಗ್ನಿ ಶಾಮಕ ಇಲಾಖೆ ಸಹ ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿ ಕಾಳಪ್ಪ ಅವರಿಗೆ ಹೇಳಿದರು. ವೀರಾಜಪೇಟೆ ತಾಲೂಕು ಕಚೇರಿ ಹಾಗೂ ವೀರಾಜಪೇಟೆ ಪ.ಪಂ.ನಲ್ಲಿ ಸಹಾಯವಾಣಿ ಕೇಂದ್ರ ಸೂಕ್ತವಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣಾಧಿಕಾರಿಗಳು ಶಾಲಾಮಕ್ಕಳಿಗೆ ಆಗತ್ಯ ಸಂದರ್ಭದಲ್ಲಿ ರಜೆ ನೀಡಬೇಕು. ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿಗಳು ಸಹ ಎಲ್ಲಾ ರೀತಿಯಲ್ಲಿ ಜಾಗೃತೆ ವಹಿಸಬೇಕು; ಕಳೆದ ಬಾರಿ ಪ್ರಕೃತಿ ವಿಕೋಪವಾದ ಕಡೆ ಹೆಚ್ಚಿನ ಜಾಗೃತೆ ವಹಿಸಬೇಕು ಎಂದರು. ಗ್ರಾ.ಪಂ.ಗಳಿಗೆ ೬೦ ಸಾವಿರ ತುರ್ತುನಿಧಿ ನೀಡಲಾಗುತ್ತದೆ. ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಸಭೆಯನ್ನು ಮತ್ತೆ ಕರೆದು ಆಗತ್ಯ ಸೂಚನೆ ಸಲಹೆ ನೀಡುವಂತೆ ಹೇಳಿದರು.