*ಸಿದ್ದಾಪುರ, ಮೇ ೧೭: ಕೊಡಗಿನ ಬೆಳೆಗಾರರ ಸ್ಥಿತಿ ಕಳೆದ ಐದು ವರ್ಷಗಳಿಂದ ಬಾಣಲೆ ಯಿಂದ ಬೆಂಕಿಗೆ ಬಿದ್ದಂತಾಗಿದೆ. ಪ್ರಾಕೃತಿಕ ವಿಕೋಪ, ದುಬಾರಿ ನಿರ್ವಹಣೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು, ಇದರ ಜೊತೆ ಜೊತೆಯಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ವನ್ಯಜೀವಿಗಳ ದಾಳಿ.
ಕಾಡಾನೆಗಳು ಜಿಲ್ಲೆಯ ಕಾಫಿ ತೋಟಗಳನ್ನು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡು ಸುಮಾರು ೧೦ ವರ್ಷಗಳೇ ಕಳೆದಿವೆೆ. ಇದೇ ಅವಧಿಯಲ್ಲಿ ನೂರಾರು ಸಾವು, ನೋವುಗಳು ಇದೇ ಮೂಕ ವನ್ಯಜೀವಿಯಿಂದ ಸಂಭವಿಸಿವೆÉ. ಇತ್ತೀಚಿನ ವರ್ಷಗಳಲ್ಲಿ ಹುಲಿ, ಚಿರತೆ, ಕಾಡೆಮ್ಮೆ, ಕಾಡು ಹಂದಿಗಳ ಉಪಟಳ ಕೂಡ ಮಿತಿ ಮೀರಿದೆ. ಇವುಗಳು ಆಗೊಮ್ಮೆ, ಈಗೊಮ್ಮೆ ಬಂದು ಹೋಗಬಹುದು, ಆದರೆ ಕಾಡಾನೆಗಳು ಮಾತ್ರ ಕೊಡಗು ಜಿಲ್ಲೆಯ ಕಾಫಿ ತೋಟಗಳನ್ನೇ ತವರು ಮನೆ ಎಂದು ಭಾವಿಸಿ ದಂತಿದೆ. ಕಾಡಾನೆಗಳ ಹಿಂಡು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಾನಪಲ್ಲಟವಾಗುತ್ತಿವೆಯೇ ಹೊರತು ಯಾವುದೇ ಕಾರಣಕ್ಕೂ ಅರಣ್ಯದೆಡೆಗೆ ಮುಖ ಮಾಡುತ್ತಿಲ್ಲ.
ಇದು ಬೆಳೆಗಾರರಿಗೆ ಮಾತ್ರವಲ್ಲದೆ ಅರಣ್ಯ ಇಲಾಖೆಗೂ ದೊಡ್ಡ ತಲೆ ನೋವಾಗಿ ಪರಿಣ ಮಿಸಿದ್ದು, ಎಲ್ಲರೂ ಅಸಹಾಯ ಕರಾಗಿದ್ದಾರೆ. ಕಾಡಿನಲ್ಲಿ ಆಹಾರ ಮತ್ತು ನೀರಿನ ಅಭಾವವನ್ನು ಎದುರಿಸುತ್ತಿರುವ ಕಾಡಾನೆಗಳು ಬಾಳೆ, ತೆಂಗು, ಅಡಿಕೆ, ಭತ್ತ ಮತ್ತಿತರ ಬೆಳೆಗಳಿಗಾಗಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲAತೂ ಹಲಸಿನ ಹಣ್ಣಿನ ಆಸೆಗಾಗಿ ಹಿಂಡು, ಹಿಂಡು ಆನೆಗಳು ತೋಟಗಳಿಗೆ ನುಗ್ಗುತ್ತಿವೆ. ಇದರಿಂದ ಕಾಫಿ, ಏಲಕ್ಕಿ, ಕಾಳು ಮೆಣಸು ಗಿಡಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಮರಗಳನ್ನು ಕಡಿಯಲು ಆಗದೆ, ಉಳಿಸಿಕೊಳ್ಳಲೂ ಆಗದೆ ಪರದಾಡುತ್ತಿರುವ ಬೆಳೆಗಾರರು ತೋಟವನ್ನು ಮಾರಿ ಬಿಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ.
ಸಿದ್ದಾಪುರ, ಅಭ್ಯತ್ಮಂಗಲ, ವಾಲ್ನೂರು, ತ್ಯಾಗತ್ತೂರು, ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ತೋಟಗಳನ್ನು ಕಾಡಾನೆಗಳು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿ ರುವುದಲ್ಲದೆ ಗಜಮಾರ್ಗವನ್ನಾಗಿ ಮಾರ್ಪಡಿಸಿಕೊಂಡಿವೆ. ಈ ಭಾಗದಲ್ಲಿ ಪ್ರಸ್ತುತ ಹಲಸಿನ ಹಣ್ಣು ಘಮಘಮಿಸುತ್ತಿದ್ದು, ಹಣ್ಣಿನ ಆಸೆಗಾಗಿ ಲಗ್ಗೆ ಇಡುತ್ತಿರುವ ಗಜಹಿಂಡಿನಿAದ ತೋಟ ಸಂಪೂರ್ಣವಾಗಿ ಹಾನಿಗೀಡಾಗುತ್ತಿದೆ. ಅಲ್ಲದೆ ಇವುಗಳ ಚಲನವಲನ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕವನ್ನೂ ಮೂಡಿಸುತ್ತಿದೆ. ಏನೂ ತಿಳಿಯದ ಆನೆಗಳಿಗೆ ಮತ್ತಷ್ಟು ಬಲಿಯಾಗುವುದು ಬೇಡ ಎನ್ನುವುದೇ ಬೆಳೆಗಾರರ ಪ್ರಾರ್ಥನೆಯಾಗಿದೆ.
ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳಿಂದ ಆಗಿರುವ ಹಾನಿಗೆ ಇಲ್ಲಿಯವರೆಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರೆತಿಲ್ಲ. ಆನೆ ದಾಳಿಯಿಂದ ಸತ್ತವರ ಕುಟುಂಬಕ್ಕೆ ೫ ರಿಂದ ಏಳೂವರೆ ಲಕ್ಷದವರೆಗೆ ಪರಿಹಾರದ ಹಣ ನೀಡಲಾಗುತ್ತದೆ. ಆದರೆ ಇದೇ ವನ್ಯಜೀವಿಗಳ ದಾಂಧಲೆಯಿAದ ಸಂಪೂರ್ಣವಾಗಿ ನಾಶವಾದ ತೋಟಗಳಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ.
ಹಣ ನೀಡದಿದ್ದರೂ ರ್ವಾಗಿಲ್ಲ, ಆದರೆ ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಪರಿಹಾರವನ್ನಾದರೂ ಸೂಚಿಸಿ ಎಂದು ಗೋಗರೆದರೂ ಇಲ್ಲಿಯವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸುವ ಕಾರ್ಯ ಅರ್ಧದಲ್ಲೇ ನಿಂತಿದೆ.
ಕೇವಲ ಪಟಾಕಿ ಸಿಡಿಸುವುದರಿಂದ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳಾಂತರಗೊಳ್ಳುತ್ತಿವೆಯೇ ಹೊರತು ಅರಣ್ಯಕ್ಕೆ ಮರಳುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಅರಿಯದ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೂಲಕ ಶಾಶ್ವತ ಯೋಜನೆ ಯೊಂದನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಬೆಳೆಗಾರರು ಹಾಗೂ ಕಾರ್ಮಿಕ ಮುಖಂಡರಿAದ ಕೇಳಿ ಬಂದಿದೆ.
ಒAದೆಡೆ ಅಕಾಲಿಕ ಮತ್ತು ಅತಿಯಾದ ಮಳೆಯಿಂದ ತೋಟಗಳು ನಾಶವಾಗುತ್ತಿದ್ದರೆ ಮತ್ತೊಂದೆಡೆ ವನ್ಯಜೀವಿಗಳ ದಾಳಿಗೆ ನೆಲಸಮ ವಾಗುತ್ತಿವೆ. ಇದರ ನಡುವೆಯೇ ಕೋವಿಡ್ ಸಂದಿಗ್ಧ ಪರಿಸ್ಥಿತಿ ಎದುರಾಗಿದ್ದು, ತೋಟದ ನಿರ್ವಹಣೆ ಅಸಾಧ್ಯವಾಗಿದೆ. ಮಾಲೀಕರು ಹಾಗೂ ಕಾರ್ಮಿಕರು ತಲೆಹಾಕದ ತೋಟಗಳಲ್ಲಿ ಗಜಹಿಂಡುಗಳದ್ದೇ ದರ್ಬಾರ್ ನಡೆಯುತ್ತಿದೆ. ಮತ್ತೊಂದು ಕಡೆ ಹಾಲಿಗಾಗಿ ತಾವು ಸಾಕಿದ ಹಸು, ಎಮ್ಮೆಗಳ ಮೇಲೆ ಹುಲಿ ದಾಳಿಯಾಗುತ್ತಿದೆ.
ಒಟ್ಟಿನಲ್ಲಿ ಬೆಳೆಗಾರರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆ ದಂತಾಗಿದ್ದು, ಸಾಲ ಮರುಪಾವತಿಸ ಲಾಗದ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದಾರೆ. ಕಾಡಾನೆಗಳ ದಾಳಿಯಿಂದ ತೋಟಗಳನ್ನು ಉಳಿಸಿ ಕೊಳ್ಳಬೇಕಾದರೆ ಜಿಲ್ಲೆಯ ಜನಪ್ರತಿ ನಿಧಿಗಳು, ಅರಣ್ಯ ಅಧಿಕಾರಿಗಳು ಹಾಗೂ ಸರ್ಕಾರ ಇಚ್ಛಾಶಕ್ತಿಯ ಕೊರತೆಯಿಂದ ಹೊರ ಬರುವ ಅನಿವಾರ್ಯತೆ ಇದೆ ಎಂದು ವಾಲ್ನೂರು, ತ್ಯಾಗತ್ತೂರು ಭಾಗದ ಪ್ರಮುಖರಾದ ಮುಂಡ್ರಮನೆ ಸುದೇಶ್, ಪ್ರದೀಪ್, ಭುವನೇಂದ್ರ ಮತ್ತಿತರ ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.
ಭತ್ತದ ಕಣಜವೆಂದೇ ಖ್ಯಾತಿ ಪಡೆದಿದ್ದ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಮತ್ತು ಬೆಳೆಗೆ ಸೂಕ್ತ ಬೆಲೆ ಸಿಗದೆ ಇರುವುದರಿಂದ ಗದ್ದೆಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದೇ ಪರಿಸ್ಥಿತಿ ಮುಂದೊAದು ಕಾಫಿ ತೋಟಗಳಿಗೂ ಎದುರಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಬೆಳೆಗಾರರಿಗೆ ತಮ್ಮ ತೋಟಗಳ ಮೇಲೆ ಬೇಸರ ಮೂಡುವ ಮೊದಲು ನಮ್ಮನ್ನಾಳುವ ಸರ್ಕಾರಗಳು ಎಚ್ಚೆತ್ತುಕೊಂಡರೆ ಕೊಡಗು ಹಾಗೂ ಕರ್ನಾಟಕ ಕಾಫಿಗಾಗಿ ಪರಾವಲಂಬಿ ಯಾಗುವುದನ್ನು ತಪ್ಪಿಸಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
- ಅಂಚೆಮನೆ ಸುಧಿ