ಸಿದ್ದಾಪುರ, ಮೇ ೧೮: ಹಾಡು ಹಗಲೇ ಮೇಯುತ್ತಿದ್ದ ಗಬ್ಬದ ಹಸು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಸಿದ್ದಾಪುರದ ಕರಡಿಗೋಡು ಗ್ರಾಮದ ಟೀಕ್ವುಡ್ ಎಸ್ಟೇಟ್ ಮಾಲೀಕ ಕೆ.ಪಿ. ನಂದಾಗಣಪತಿ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ಎಂದಿನAತೆ ಅವರಿಗೆ ಸೇರಿದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಬೆಳಿಗ್ಗೆ ಕಟ್ಟಿ ಹಾಕಿದ ಹಸುವನ್ನು ಬೇರೆ ಕಡೆಗೆ ಮೇಯಲು ಕಟ್ಟಿ ಹಾಕಲೆಂದು ಮಧ್ಯಾಹ್ನ ೧೨ ಗಂಟೆಯ ಸಮಯಕ್ಕೆ ಕಾರ್ಮಿಕರು ಹಸುವಿನ ಬಳಿ ತೆರಳಿದ್ದರು. ಅಷ್ಟರಲ್ಲಿ ಹಸು ಮಲಗಿರುವುದನ್ನು ಕಂಡು ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಮಾಲೀಕ ನಂದಾಗಣಪತಿ ಹಸುವಿನ ಬಳಿ ಹೋಗದಂತೆ ತಿಳಿಸಿದರು. ಬಳಿಕ ನೋಡುವಷ್ಟರಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದು ಹಸುವಿಗೆ ವಿದ್ಯುತ್ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವುದು ಗೋಚರಿಸಿದೆ. ನಂದಾ ಅವರ ಸಮಯ ಪ್ರಜ್ಞೆಯಿಂದ ಕಾರ್ಮಿಕರು ಕೂಡ ಅಪಾಯದಿಂದ ಪಾರಾಗಿದ್ದಾರೆ.
ಮಳೆ - ಗಾಳಿಯಿಂದಾಗಿ ವಿದ್ಯುತ್ ತಂತಿ ಕೆಳಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಅಂದಾಜು ೩ ವರ್ಷ ಪ್ರಾಯದ ಜರ್ಸಿ ತಳಿಯ ಹಸು ಸಾವನ್ನಪ್ಪಿದ್ದು, ಇನ್ನೇನು ೧೦ ದಿನಗಳಲ್ಲಿ ಕರು ಹಾಕುವ ಸಾಧ್ಯತೆ ಇತ್ತು ಎಂದು ನಂದಾಗಣಪತಿ ತಿಳಿಸಿದರು. ಸಿದ್ದಾಪುರ ಪೊಲೀಸ್ ಠಾಣೆಗೆ ಹಾಗೂ ಚೆಸ್ಕಾಂ ನಿಗಮಕ್ಕೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ. ಇತ್ತೀಚೆಗೆ ಅರೆಕಾಡು ಬಳಿ ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟಿತ್ತು.