ಮಡಿಕೇರಿ, ಮೇ ೧೮: ಮಡಿಕೇರಿ ವಕೀಲರ ಸಂಘದ ವತಿಯಿಂದ ಐವರು ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ, ಹಿರಿಯ ಸಿವಿಲ್ ನ್ಯಾಯಾಧೀಶ ರೂಪ ಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಬ್ರಮಣ್ಯ ಎನ್, ಪ್ರಧಾನ ಸಿವಿಲ್ ನ್ಯಾಯಾಧೀಶ ಮನು ಬಿ.ಕೆ, ಅಪರ ಸಿವಿಲ್ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ ಅವರು ಮಡಿಕೇರಿ ನ್ಯಾಯಾಲಯದಿಂದ ವರ್ಗಾವಣೆ ಗೊಂಡಿದ್ದು, ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಬೀಳ್ಕೊಡಲಾಯಿತು. ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ. ದಯಾನಂದ ಅವರು ಅಧ್ಯಕ್ಷತೆ ವಹಿಸಿ, ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಶುಭ ಹಾರೈಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿನರಾಲ್ಕರ್ ಭೀಮರಾವ್ ಲಗಮಪ್ಪ ಮಾತನಾಡಿದರು. ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷರಾದ ಕೆ.ಎಸ್. ತಮ್ಮಯ್ಯ ವಂದಿಸಿದರು. ಸಂಘದ ಖಜಾಂಚಿ ಬಿ.ಸಿ. ದೇವಿಪ್ರಸಾದ್, ಜಂಟಿ ಕಾರ್ಯದರ್ಶಿ ಎಂ.ವಿ. ಸಂಜಯ್ ರಾಜ್, ಪದಾಧಿಕಾರಿಗಳಾದ ಪಿ.ಆರ್. ಚಂದನ್, ಡಿ.ಎನ್. ಡೊಮಿನಿಕ್, ದಿವ್ಯಾ ನಂಜಪ್ಪ, ಡಿ.ಕೆ. ರಾಜೇಶ್, ತಾಹ ಯಾಸೀನ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.