ಸೋಮವಾರಪೇಟೆ, ಮೇ ೧೭: ಕಳೆದ ನಾಲ್ಕೆöÊದು ದಿನಗಳಿಂದ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟು ವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕಾಫಿ, ಕರಿಮೆಣಸು ಕೃಷಿಕರಿಗೆ ಈ ಮಳೆ ಹರ್ಷ ತಂದಿದ್ದರೆ, ಗದ್ದೆಗಳಲ್ಲಿ ಹಸಿಮೆಣಸು ಬೆಳೆದಿರುವ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಸೋಮವಾರಪೇಟೆ ಕಸಬಾ ಹೋಬಳಿ ಸೇರಿದಂತೆ ಶಾಂತಳ್ಳಿ ಹೋಬಳಿ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹಸಿಮೆಣಸು ಬೆಳೆದಿರುವ ರೈತರು ಅತ್ತ ಬೆಲೆಯೂ ಇಲ್ಲದೇ, ಇತ್ತ ಮೆಣಸನ್ನು ಕೊಯ್ಲು ಮಾಡಲಾಗದ ಸ್ಥಿತಿಗೆ ಸಿಲುಕಿದ್ದಾರೆ. ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಉಳಿದಿರುವ ಮೆಣಸನ್ನು ಕೊಯ್ಲು ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು ಕಾಫಿ ತೋಟಗಳಿಗೆ ಈಗಿನ ಮಳೆ ಉತ್ತಮ ವಾತಾವರಣ ನಿರ್ಮಿಸಿದೆ. ಬೇಸಿಗೆಯಲ್ಲಿ ಒಣಗಿ ನಿಂತಿದ್ದ ಕಾಫಿ ಗಿಡಗಳು ಇದೀಗ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಸಾಲಿಗೆ ಬಂಪರ್ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಈಗಾಗಲೇ ಉತ್ತಮವಾಗಿ ಹೂ ಮಳೆಯಾಗಿದ್ದು, ಇದೀಗ ಸುರಿಯುತ್ತಿರುವ ಮಳೆ ಗೊಬ್ಬರ ಹಾಕಲು ಉತ್ತಮ ಹವಾಮಾನ ಸೃಷ್ಟಿಸಿದೆ. ಕಾಫಿ ತೋಟಗಳಲ್ಲಿ ಚಿಗುರು ತೆಗೆಯುವ ಕೆಲಸ ಭರದಿಂದ ಸಾಗುತ್ತಿದ್ದು, ಗೊಬ್ಬರ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ. ಸಹಕಾರ ಸಂಘಗಳ ಮೂಲಕ ಗೊಬ್ಬರ ಪಡೆಯಲು ರೈತರು ಮುಂದಾಗಿದ್ದು, ಹಲವು ಕಡೆಗಳಲ್ಲಿ ಈಗಾಗಲೇ ಗೊಬ್ಬರ ಹಾಕುವ ಕಾರ್ಯ ಮುಗಿದಿದೆ.
ಒಟ್ಟಾರೆ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಮಳೆ ಕಾಫಿ ಕೃಷಿಕರಲ್ಲಿ ಸಂತಸ ಮೂಡಿಸಿದೆ. ಕಾಳುಮೆಣಸು ಬಳ್ಳಿಗಳಲ್ಲಿ ಉತ್ತಮ ಚಿಗುರು ಮೂಡಲು ಈಗಿನ ಮಳೆ ಸಹಕಾರಿಯಾಗಿದೆ.
ಅರ್ಧ ಗಂಟೆ ಮಳೆಯ ಅವಾಂತರ: ನಿನ್ನೆ ಸಂಜೆ ೩.೩೦ರಿಂದ ೪ ಗಂಟೆಯವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಚರಂಡಿಗಳಲ್ಲಿದ್ದ ಕಲ್ಲು ಮಣ್ಣು, ತ್ಯಾಜ್ಯಗಳು ರಸ್ತೆಗೆ ಹರಿದುಬಂದಿದ್ದು, ರಸ್ತೆಯ ತುಂಬೆಲ್ಲಾ ಹರಡಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನ ಸೇತುವೆಯ ಬಳಿ ಕಸದ ಗುಡ್ಡೆಗಳು ನಿರ್ಮಾಣಗೊಂಡಿವೆ.
ನಿನ್ನೆ ಸುರಿದ ಮಳೆಗೆ ಹೈಟೆಕ್ ಮಾರುಕಟ್ಟೆಯ ಆವರಣದೊಳಗೆ ಮಳೆ ನೀರು ಹರಿದುಬಂದಿದ್ದು, ತರಕಾರಿಗಳು ಕೊಳಚೆ ನೀರಿನಲ್ಲಿ ತೇಲಿ ವರ್ತಕರಿಗೆ ನಷ್ಟವಾಗಿದೆ. ಮಾರುಕಟ್ಟೆ ಛಾವಣಿಯಿಂದಲೂ ನೀರು ಸೋರಿಕೆಯಾಗಿದ್ದು, ದಿನಸಿ ಪದಾರ್ಥಗಳನ್ನು ರಕ್ಷಿಸಿಕೊಳ್ಳಲು ವರ್ತಕರು ಹರಸಾಹಸ ಪಟ್ಟಿದ್ದಾರೆ. ದಿನಸಿ, ತರಕಾರಿ ಖರೀದಿಸಲು ಬಂದಿದ್ದ ಗ್ರಾಹಕರು ಸಂತೆ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಪಟ್ಟಣದಲ್ಲಿ ಸುರಿದ ಮಳೆ ಲೋರ‍್ಸ್ ಕಾಲೋನಿ ಮೂಲಕ ಹರಿದಿದ್ದು, ಮನೆಯೊಳಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇಲ್ಲಿರುವ ರಾಜಕಾಲುವೆಯನ್ನು ಸ್ಥಳೀಯ ಕೆಲವರು ಒತ್ತುವರಿ ಮಾಡಿಕೊಂಡಿರುವುದರಿAದ ಮಳೆ ನೀರಿನ ಸರಾಗ ಹರಿವಿಗೆ ತಡೆಯಾಗಿದ್ದು, ಮನೆಗಳ ಒಳಗೆ ಕೊಳಚೆ ನೀರು ನುಗ್ಗುತ್ತಿದೆ. ರಾಜ ಕಾಲುವೆಯ ಒತ್ತುವರಿ ತೆರವುಗೊಳಿಸಿ, ಮಳೆ ನೀರಿನ ಸರಾಗ ಹರಿವಿಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.