ಗೋಣಿಕೊಪ್ಪಲು, ಮೇ ೧೭: ಕಳೆದ ೯ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರಿಗೆ ಗಿರಿಜನ ಕಲ್ಯಾಣಾಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆಗಳನ್ನು ನೀಡಿದಲ್ಲಿ ಪ್ರತಿಭಟನೆಯನ್ನು ಕೈ ಬಿಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಲಿಖಿತ ರೂಪದ ಹೇಳಿಕೆಗೆ ಪಟ್ಟು ಹಿಡಿದಿದ್ದಾರೆ.
ಕಳೆದ ತಾ. ೪ ರಂದು ೬೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಹೆಚ್.ಡಿ. ಕೋಟೆಯ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವೀರಾಜಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದ ಗೇಟ್ ಬಳಿ ಪ್ರತಿಭಟನೆ ಆರಂಭಿಸಿ ೯ ದಿನಗಳು ಕಳೆದಿವೆ.
ಸುರಿಯುತ್ತಿರುವ ಮಳೆ ಹಾಗೂ ಗಾಳಿಯನ್ನು ಲೆಕ್ಕಿಸದೆ ಮಹಿಳೆಯರು, ಮಕ್ಕಳಾದಿಯಾಗಿ ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ವಿಪರೀತ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆಯನ್ನು ಕೈಬಿಡುವಂತೆ ಹೋರಾಟಗಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದರೂ ಪ್ರತಿಭಟನೆಯನ್ನು ಹಿಂಪಡೆಯಲಿಲ್ಲ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಹೋರಾಟದ ಮುಂದಾಳತ್ವ ವಹಿಸಿರುವ ಜೇನುಕುರುಬರ ಅಯ್ಯಪ್ಪ ಒತ್ತಾಯಿಸಿದ್ದಾರೆ.
ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಕೆಲಸ ಕಾರ್ಯದ ಬಗ್ಗೆ ಆದಿವಾಸಿ ಮುಖಂಡರು ಖುದ್ದು ಭೇಟಿ ನೀಡಿ ವಸ್ತು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹೀಗಾಗಿ ಕೆಲಸವು ಪ್ರಗತಿಯಲ್ಲಿರುವುದರಿಂದ ಹೋರಾಟಗಾರರು ತಾ. ೧೮ ರಂದು (ಇಂದು) ಪ್ರತಿಭಟನೆಯನ್ನು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ.
-ಹೆಚ್.ಕೆ. ಜಗದೀಶ್