ಶ್ರೀಮಂಗಲ, ಮೇ ೧೬: ಹಾಡಹಗಲೇ ಮೇಯಲು ಬಯಲಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಹಸುವನ್ನು ಕೊಂದಿರುವ ಘಟನೆ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬೊಳ್ಳೇರ ಚಿಣ್ಣಪ್ಪ ಅವರು ಮನೆಯ ಹತ್ತಿರ ಬಯಲಲ್ಲಿ ಮೇಯಲು ಕಟ್ಟಿದ್ದ ಗಬ್ಬದ ಹಸುವಿನ ಮೇಲೆ ಸೋಮವಾರ ಮಧ್ಯಾಹ್ನ ಹುಲಿ ಎರಗಿದ್ದು,ಈ ಸಂದರ್ಭ ಹಸುವಿನ ಅರಚಾಟ ಕೇಳಿಬಂದ ಚಿಣ್ಣಪ್ಪ ಹಾಗೂ ಕಾರ್ಮಿಕರು ಜೋರಾಗಿ ಕೂಗಿಕೊಂಡಾಗ ಹಸುವನ್ನು ಕೊಂದು ಸ್ಥಳದಿಂದ ಹುಲಿ ಸಮೀಪದ ಕಾಫಿ ತೋಟಕ್ಕೆ ನುಸುಳಿದೆ.
(ಮೊದಲ ಪುಟದಿಂದ) ತಾ. ೧೨ ರಂದು ಚಿಣ್ಣಪ್ಪ ಅವರಿಗೆ ಸೇರಿದ ಇನ್ನೊಂದು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು.ಈ ಹಸು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದು,ಚಿಕಿತ್ಸೆ ಮುಂದುವರೆಸಲಾಗಿದೆ.ಇದರ ನಡುವೆಯೇ ಇನ್ನೊಂದು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಹಾಡಹಗಲೇ ಹುಲಿ ದಾಳಿ ಮಾಡಿರುವುದರಿಂದ ಮತ್ತು ಹುಲಿ ತೋಟದಲ್ಲಿ ಇರುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರಲ್ಲಿ ಮನೆಯಿಂದ ಹೊರಗೆ ಬರಲು, ತೋಟದಲ್ಲಿ ಕಾರ್ಮಿಕರು,ಬೆಳೆಗಾರರು ಕೆಲಸ ಮಾಡಲು ಆತಂಕ ಉಂಟು ಮಾಡಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟದ ಬಿರುನಾಣಿ ವಿಭಾಗದ ಅಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೪ ದಿನದ ಹಿಂದೆ ಚಿಣ್ಣಪ್ಪ ಅವರ ಹಸುವಿನ ಮೇಲೆ ದಾಳಿ ಮಾಡಿದಾಗ ಅರಣ್ಯ ಇಲಾಖೆ ಎಚ್ಚೆತ್ತು ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರೆ, ೨ನೇ ದಾಳಿ ಆಗುತ್ತಿರಲಿಲ್ಲ. ಕೂಡಲೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಬೇಕು. ಹಸು ಕಳೆದುಕೊಂಡ ಚಿಣ್ಣಪ್ಪ ಅವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಅಪ್ಪುಟ ಪೊನ್ನಪ್ಪ ಒತ್ತಾಯಿಸಿದ್ದಾರೆ.