ಮಡಿಕೇರಿ, ಮೇ ೧೬: ಹಾಕಿ ಇಂಡಿಯಾ ವತಿಯಿಂದ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆಯು ತ್ತಿರುವ ಸೀನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಪ್‌ನಲ್ಲಿ ಹಾಕಿ ಕರ್ನಾಟಕ ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ. ಬಹುತೇಕ ಕೊಡಗು ಜಿಲ್ಲೆಯ ಆಟಗಾರ್ತಿಯರನ್ನು ಒಳಗೊಂಡಿರುವ ಹಾಕಿ ಕರ್ನಾಟಕ ತಂಡ ಇಂದು ನಡೆದ ಸೆಮಿಫೈನಲ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಹಾಕಿ ಹರ್ಯಾಣ ತಂಡವನ್ನು ರೋಮಾಂಚಕಾರಿ ಪಂದ್ಯದಲ್ಲಿ ೨-೦ ಗೋಲಿನಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದೆ. ತಂಡದ ಪರ ಕೊಡಗಿನ ಆಟಗಾರ್ತಿ ಪಿ.ಸಿ. ನಿಷಾ ಹಾಗೂ ಶಿವಮೊಗ್ಗ ಮೂಲದ ಪೂಜಿತಾ ಗೋಲು ಬಾರಿಸಿದರು. ಸೀನಿಯರ್ ನ್ಯಾಷನಲ್ ಹಾಕಿಯಲ್ಲಿ ಕರ್ನಾಟಕ ಮಹಿಳಾ ತಂಡ ಸುಮಾರು ೧೨ ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವ ಮೂಲಕ ದಾಖಲೆ ನಿರ್ಮಿಸಿದೆ. ತಾ. ೧೭ರಂದು (ಇಂದು) ಫೈನಲ್ ಪಂದ್ಯ ಜರುಗಲಿದೆ.