ಸೋಮವಾರಪೇಟೆ, ಮೇ ೧೬: ಪಟ್ಟಣದಲ್ಲಿ ಇಂದು ಸಂಜೆ ೩.೩೦ರ ಸುಮಾರಿಗೆ ಭರ್ಜರಿ ಮಳೆ ಯಾದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಅರ್ಧಗಂಟೆಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಸಂತೆಗೆ ಆಗಮಿಸಿದ್ದ ಮಂದಿ ತೊಂದರೆ ಅನುಭವಿಸಿದರು.
ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ಪಟ್ಟಣದಲ್ಲಿ ಜನ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು, ಸಂತೆಗೆ ಆಗಮಿಸಿದ್ದ ಸಾರ್ವಜನಿಕರು ಮಳೆಗೆ ಸಿಲುಕಿಕೊಂಡರು.
ಪಟ್ಟಣದ ಹೈಟೆಕ್ ಮಾರುಕಟ್ಟೆಯ ಸಂತೆಯಲ್ಲಿ ಮಳೆ ನೀರು ಶೇಖರಣೆಗೊಂಡು ಗ್ರಾಹಕರು ಹಾಗೂ ವರ್ತಕರು ತೊಂದರೆಗೆ ಒಳಗಾದರು. ಮಳೆ ನೀರು ಸಂತೆಯ ಆವರಣಕ್ಕೆ ನುಗ್ಗಿದ್ದರಿಂದ ಕೆಸರಿನ ಕೊಂಪೆಯಾಯಿತು. ಭಾರೀ ಮಳೆಯೊಂದಿಗೆ ಗುಡುಗು ಮಿಂಚು ಇದ್ದುದರಿಂದ ಕೆಲಕಾಲ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.