ಮಡಿಕೇರಿ, ಮೇ ೧೫: ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಶಾಲೆಯಲ್ಲಿ ಭಜರಂಗದಳದ ವತಿಯಿಂದ ಕಳೆದ ೯ ರಿಂದ ಕೆಲವು ದಿನಗಳ ಕಾಲ ನಡೆದ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರ ಇದೀಗ ವಿವಾದವಾಗಿ ಮಾರ್ಪಟ್ಟಿದೆ. ಶಿಬಿರದ ಸಂದರ್ಭ ಶಾಲಾ ಆವರಣದಲ್ಲಿ ತರಬೇತಿಗೆ ಆಗಮಿಸಿದ್ದವರು ಶಸ್ತಾçಸ್ತçಗಳನ್ನು ಹಿಡಿದು ತರಬೇತಿ ಪಡೆಯುತ್ತಿದ್ದ ಬಗ್ಗೆ ಚಿತ್ರಗಳ ಸಹಿತ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮಾಹಿತಿ ನೀಡಿದ್ದು, ಕೆಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಕಂಡು ಬಂದಿದೆ.

ಈ ಕುರಿತು ಭಜರಂಗದಳ ಪ್ರಮುಖರನ್ನು ಸಂಪರ್ಕಿಸ ಬಯಸಿದಾಗ ಯಾರು ಸಂಪರ್ಕಕ್ಕೆ ಸಿಗಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಕೂಡ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ವೀರಾಜಪೇಟೆ ಡಿ.ವೈ.ಎಸ್.ಪಿ. ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಈ ಕುರಿತು ತನಗೂ ಕೂಡ ಮಾಹಿತಿ ಲಭ್ಯವಾಗಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು.

ಆದರೆ, ಭಜರಂಗದಳದ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರವು ಪ್ರತಿವರ್ಷ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದ್ದು, ಈ ವರ್ಷವೂ ಕಳೆದ ವಾರ ರಜೆ ಇದ್ದ ಹಿನ್ನೆಲೆ ಸ್ಥಳಾವಕಾಶ ಕಲ್ಪಿಸಿರುವುದಾಗಿ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಉದ್ಘಾಟನಾ ಸಂದರ್ಭ ಶಿಕ್ಷಣ ಪ್ರಾಂತ ಭಜರಂಗದಳ ಸಂಯೋಜಕ ರಘು ಸಕಲೇಶಪುರ, ಸಹಸಂಯೋಜಕ ಕೃಷ್ಣಮೂರ್ತಿ, ಸಾಯಿಶಂಕರ ಶಾಲೆಯ ಅಧ್ಯಕ್ಷ ಝರು ಗಣಪತಿ, ಭಜರಂಗದಳ ಜಿಲ್ಲಾ ಸಂಯೋಜಕ ಅನೀಶ್ ಕುಮಾರ್ ಮೊದಲಾದವರಿದ್ದು, ಉದ್ಘಾಟನೆಯನ್ನು ಅಖಿಲ ಭಾರತ ಭಜರಂಗದಳದ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ಅವರು ನೆರವೇರಿಸಿದ್ದರು.