ಮಡಿಕೇರಿ, ಮೇ ೧೬: ರಾಜ್ಯ ಕಂದಾಯ ಸಚಿವರು ಜಿಲ್ಲೆಗೆ ಬಂದಿದ್ದ ಸಂದರ್ಭ ಜಿಲ್ಲಾಧಿಕಾರಿಗಳು ಬಿಜೆಪಿ ಪಕ್ಷದ ವೇದಿಕೆಯಲ್ಲಿ ಭಾಗಿಯಾಗಿದ್ದರು ಎಂಬ ಕಾಂಗ್ರೆಸ್ ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿರುವುದು ವಾಡಿಕೆ. ಹಾಗಾಗಿ ಜಿಲ್ಲಾಧಿಕಾರಿಗಳು ಕಂದಾಯ ಸಚಿವರು ಇದ್ದ ಸ್ಥಳಕ್ಕೆ ಬಂದಿದ್ದಾರೆ. ಆದರೆ ಎಲ್ಲಿಯೂ ವೇದಿಕೆಯಲ್ಲಾಗಲೀ, ಚರ್ಚೆಯಲ್ಲಾಗಲಿ ಪಾಲ್ಗೊಂಡಿಲ್ಲ. ರೈತ ಸಮಾವೇಶದ ನಂತರ ಪ್ರತ್ಯೇಕವಾಗಿ ಬೇರೆ ಕಡೆ ನಡೆಸಿದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಪಕ್ಷದ ಯಾವದೇ ಬ್ಯಾನರ್ ಇರಲಿಲ್ಲ, ಅದು ಪಕ್ಷದ ವೇದಿಕೆಯೂ ಆಗಿರಲಿಲ್ಲ. ಆದರೂ ಅಗ್ಗದ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ಅನವಶ್ಯಕವಾಗಿ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ತಾಲೂಕು ವಕ್ತಾರ ತೆನ್ನಿರ ಮೈನಾ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸಚಿವರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ಮಾಡಿದ ಸಂದರ್ಭ ರೈತ ಸಮಾವೇಶದ ಬಳಿಕ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಹಾಗಾಗಿ ಅಧಿಕಾರಿಗಳು ಸಚಿವರು ಇದ್ದ ಸ್ಥಳಕ್ಕೆ ಬಂದಿದ್ದರು ಎಂದು ಮಹೇಶ್ ತಿಳಿಸಿದರು. ರೈತರ ಹಿತದೃಷ್ಟಿಯಿಂದ, ರೈತರ ಏಳಿಗೆಗಾಗಿ ರೈತರ ಬಳಿಗೆ ತೆರಳಬೇಕೆಂಬ ಉದ್ದೇಶದಿಂದ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕಂದಾಯ ಸಚಿವರು ರೈತ ಸಮಾವೇಶ ಏರ್ಪಡಿಸಿದ್ದರು. ವಿಚಾರ ತಿಳಿದುಕೊಳ್ಳದೆ ಸುಮ್ಮನೆ ಹೇಳಿಕೆಗಳನ್ನು ನೀಡಬಾರದು ಎಂದು ಇದೇ ಸಂದರ್ಭ ಹೇಳಿದರು. ರೈತರ ಸಮಸ್ಯೆ ಹಾಗೂ ವನ್ಯ ಪ್ರಾಣಿ-ಮಾನವ ಸಂಘರ್ಷ ಸಮಸ್ಯೆಗಳ ಬಗ್ಗೆ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಮಿಷನ್ ದಂಧೆ ಕಾಂಗ್ರೆಸ್‌ನದ್ದು

ಕೋವಿಡ್‌ನಲ್ಲಿ ಮೃತಪಟ್ಟವರ ಸಂಖ್ಯೆಯನ್ನು ತಿರುಚಿ ಸರಕಾರ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪ್ಪಾಡ್ ಹ್ಯಾರಿಸ್ ಆರೋಪ ಮಾಡಿದ್ದಾರೆ. ಅಲ್ಲದೆ, ಕೊಡಗು ಜಿಲ್ಲೆಯಲ್ಲಿಯೂ ಶೇ.೪೦ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಆರೋಪಗಳಿಗೆ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ಯಾವದೇ ಆಧಾರವಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುವದು ಕಾಂಗ್ರೆಸ್‌ನ ಜಾಯಮಾನವಾಗಿದೆ. ಸುಳ್ಳು ಆರೋಪ, ಕಮಿಷನ್ ದಂಧೆ ಕಾಂಗ್ರೆಸ್‌ನದ್ದು ಎಂದು ಇದೇ ಸಂದರ್ಭ ಹೇಳಿದರು. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಿಬ್ಬರೂ ಜಾಮೀನಿನ ಆಧಾರದಲ್ಲಿ ಓಡಾಡಿಕೊಂಡಿದ್ದು, ಸುಳ್ಳು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸದಿರಲಿ ಎಂದು ಯುವ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಸ್.ಸಿ. ಸತೀಶ್‌ಕುಮಾರ್, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ, ಕೆ.ಎ. ಅಪ್ಪಣ್ಣ ಇದ್ದರು.