ಕೂಡಿಗೆ, ಮೇ ೧೬: ಕೂಡು ಮಂಗಳೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆ ಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಹಂತದಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚೆಗಳು ನಡೆದು ಆರಂಭಗೊಳ್ಳದ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸ ಲಾಯಿತು. ೧೫ನೇ ಹಣಕಾಸಿನ ೨೦೨೨-೨೩ ನೇ ಕ್ರಿಯಾಯೋಜನೆ ಯನ್ನು ಸಭೆಯಲ್ಲಿ ಅನುಮೋದಿಸ ಲಾಯಿತು.

ಸಭೆಯಲ್ಲಿ ಸ್ವಚ್ಛತೆ, ನೀರು ಮತ್ತು ನೈರ್ಮಲ್ಯದ ಬಗ್ಗೆ ಚರ್ಚೆಗಳನ್ನು ನಡೆಸಲಾಯಿತು. ಕೂಡುಮಂಗಳೂರು ಗ್ರಾ.ಪಂ.ನ ವ್ಯಾಪ್ತಿಯಲ್ಲಿ ನಡೆಯುತ್ತಿ ರುವ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಬಗ್ಗೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಇದಕ್ಕೆ ಸಂಬAಧಿಸಿದAತೆ ತುರ್ತು ಸಭೆ ಕರೆಯುವಂತೆ ಸದಸ್ಯರಾದ ಕೆ.ಬಿ. ಶಂಶುದ್ಧೀನ್ ಅವರು ಒತ್ತಾಯಿಸಿದರು.

ಕಾಮಗಾರಿಗಳು ಮುಗಿದ ನಂತರ ಪ್ರತೀ ವಾರ್ಡ್ನಲ್ಲಿ ಸಭೆ ಕರೆಯುವುದಾಗಿ ಪಿಡಿಓ ಸಂತೋಷ್ ಮಾಹಿತಿ ನೀಡಿದರು.

ಹಾರಂಗಿಯಲ್ಲಿ ಎರಡು ವರ್ಷ ಹಳೆಯ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿದೆ. ಆದಷ್ಟು ಬೇಗನೇ ಕಾಮಗಾರಿಯನ್ನು ಪೂರ್ಣ ಗೊಳಿಸಿಕೊಡುವಂತೆ ಸದಸ್ಯರಾದ ಮಣಿ ಹಾಗೂ ಲಕ್ಷ್ಮಿ ಅವರು ಒತ್ತಾಯಿಸಿದರು. ಸುಂದರನಗರದ ಸ್ಮಶಾನದಲ್ಲಿ ಕಾಡು ಬೆಳೆದು ನಿಂತಿದ್ದು, ಜೆಸಿಬಿ ಯಂತ್ರದ ಮುಖಾಂತರ ಸ್ವಚ್ಚಗೊಳಿಸಲು ಕೆ.ಬಿ.ಷಂಶುದ್ಧೀನ್ ಅವರು ಸಭೆಗೆ ಮನವಿ ಮಾಡಿದರು.

ನಡಾವಳಿ ಪುಸ್ತಕವನ್ನು ಸರಿಯಾಗಿ ನಿರ್ವಹಿಸದೆ ಇರುವ ಬಗ್ಗೆ ಹಿರಿಯ ಸದಸ್ಯೆ ಫಿಲೋಮಿನ ಅವರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಧ್ವನಿ ಗೂಡಿಸಿದರು. ಮುಂದಿನ ದಿನಗಳಲ್ಲಿ ತಪ್ಪನ್ನು ಸರಿಪಡಿಸುವುದಾಗಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಮಳೆಗಾಲದಲ್ಲಿ ನೀರಿನಿಂದ ತೊಂದರೆಯಾದವರಿಗೆ ಹಾರಂಗಿ ಹಾಗೂ ಬಸವನತ್ತೂರು ಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯುವ ಬಗ್ಗೆ ಪಿಡಿಓ ಸಂತೋಷ್ ಸಭೆಗೆ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು. ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಗ್ರಾ.ಪಂ. ಸದಸ್ಯರು, ಅಭಿವೃದ್ಧಿ ಅಧಿಕಾರಿ ಇದ್ದರು.