ಸುಂಟಿಕೊಪ್ಪ, ಮೇ ೧೫: ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಅತ್ತೂರು ನಲ್ಲೂರು ಭೂದಾನ ಪೈಸಾರಿಯಲ್ಲಿ ನೆಲೆ ನಿಂತಿರುವ ಕೊರಗಜ್ಜ ದೈವದ ಪುನರ್ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನಡೆಯಿತು. ರಕ್ತೇಶ್ವರಿ ಸೇವಾ ಸಮಿತಿ ವತಿಯಿಂದ ಗ್ರಾಮಸ್ಥರ ನೆರವಿನಿಂದ ಸುಮಾರು ರೂ. ೫ ಲಕ್ಷ ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಿಸಿ ಗುಡಿಯನ್ನು ಕಟ್ಟಿಸಿ ಕೊರಗಜ್ಜನ ಕೋಲ ನಡೆಸಿದ್ದು ವಿಶೇಷವಾಗಿತ್ತು. ಪ್ರತಿಷ್ಠಾಪಿಸಿದ್ದ ದೇವರ ಕಲ್ಲು ಹುತ್ತ ಬೆಳೆದು ಅದರಡಿಯಲ್ಲಿ ದೈವ ಹುದುಗಿ ಹೋಗಿತ್ತು. ಅಷ್ಠಮಂಗಲ ಪ್ರಶ್ನೆ ಕೇಳಿದಾಗ ಈ ಹುತ್ತದಲ್ಲಿ ದೇವರ ಕಲ್ಲು ಇರುವುದು ತಿಳಿದು ದಾನಿಗಳ ನೆರವಿನಿಂದ ಕೊರಗಜ್ಜನಿಗೆ ಗುಡಿ ಕಟ್ಟಿಸಿ ತಾ. ೧೩ ರಂದು ಬೆಳಿಗ್ಗೆ ೮ ಗಂಟೆಗೆ ವಿವಿಧ ವೈದಿಕ ದಾರ್ಮಿಕ ವಿದಿವಿಧಾನದೊಂದಿಗೆ ಪುನರ್ ಪ್ರತಿಷ್ಠಾಪಿಸಿ ಕೊರಗಜ್ಜ ದೈವದ ನೇಮವನ್ನು ಸಮಿತಿಯವರು ನಡೆಸಿದರು. ರಕ್ತೇಶ್ವರಿ ಸಮಿತಿ ವತಿಯಿಂದ ಪ್ರಸಾದ ಹಾಗೂ ಅನ್ನದಾನ ಏರ್ಪಡಿಸಲಾಯಿತು. ಭೂದಾನ ಪೈಸಾರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಕೊರಗಜ್ಜ ದೈವದ ಕೋಲವನ್ನು ಕಂಡು ಪುನೀತರಾದರು.