ಗೋಣಿಕೊಪ್ಪಲು, ಮೇ ೧೫: ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಆದಿವಾಸಿಗಳ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಪಹಣಿ ಪತ್ರ ಹಾಗೂ ಕೃಷಿ ಭೂಮಿ ಸಮತಟ್ಟು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಾಳೆಲೆ ಗ್ರಾಮ ಪಂಚಾಯಿತಿ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ೭ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಕಂದಾಯ ಇಲಾಖೆಯ ಅಧಿಕಾರಿಗಳು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಒಟ್ಟಾಗಿ ಸೇರಿ ಸರ್ವೆ ಕಾರ್ಯ ನಡೆಸಿವೆ. ಹುಣಸೂರು ತಾಲೂಕಿನ ತಹಶೀಲ್ದಾರ್ ಕೆ.ಆರ್.ರತ್ನಂಭಿಕೆ ಮುಂದಾಳತ್ವದಲ್ಲಿ ಸರ್ವೆ ಕಾರ್ಯ ಸಂಪೂರ್ಣ ಮುಗಿದಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಕಸಾಬ ಹೋಬಳಿಯ ರಾಜೇಗೌಡ ಹುಂಡಿ ಗ್ರಾಮದ ಸರ್ವೇ ನಂ ೩೬ ಹಾಗೂ ೩೭ ಭೀಮನ ಹಳ್ಳಿ ಗ್ರಾಮದ ಸರ್ವೆ ನಂ ೪ ಹಾಗೂ ೫ನ್ನು ವಿಂಗಡಿಸಿ ಪುನರ್ವಸತಿ ಕೇಂದ್ರದಲ್ಲಿರುವ ಕುಟುಂಬಗಳಿಗೆ ಹಂಚಿಕೆ ಮಾಡುವ ಮೂಲಕ ಇವರ ನಾಲ್ಕು ವರ್ಷಗಳ ಭೂಮಿ ಬೇಡಿಕೆಗೆ ಇಲಾಖೆಯು ಸ್ಪಂದಿಸಿದೆ.
ನಾಲ್ಕು ವರ್ಷಗಳ ಹಿಂದೆ ೧೭೭ ಆದಿವಾಸಿಗಳ ಕುಟುಂಬವನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ವೇಳೆ ಇವರಿಗೆ ಸರ್ವೆ ನಂ ೩೭ ರಲ್ಲಿ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಇದರಿಂದಾಗಿ ಪುನರ್ವಸತಿ ಕೇಂದ್ರದ ೧೭೭ ಆದಿವಾಸಿಗಳಿಗೆ ವೈಯಕ್ತಿಕ ಪಹಣಿ ಪತ್ರ ಇಲ್ಲದೇ ಯಾವುದೇ ಸವಲತ್ತುಗಳನ್ನು ಪಡೆಯಲು ಅವಕಾಶವಾಗಿರಲಿಲ್ಲ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಇತ್ತ ಪ್ರತಿಭಟನೆಯ ಕಾವಿನಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಸ್ತಿಗುಡಿಯಲ್ಲಿ ಇರುವ ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯಕ್ಕೆ ೧೬ ಟ್ರಾಕ್ಟರ್ ಬಳಸಿ ಕೆಲಸದ ವೇಗ ಹೆಚ್ಚಿಸಿದ್ದಾರೆ.
ಕೆಲವು ದಿನಗಳಲ್ಲಿ ಇಲ್ಲಿರುವ ಭೂಮಿಯನ್ನು ಸಂಪೂರ್ಣವಾಗಿ ಸಮತಟ್ಟು ಮಾಡುವ ಮೂಲಕ ಆದಿವಾಸಿಗಳು ತಮ್ಮ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಭೂಮಿಯನ್ನು ಸಿದ್ದಗೊಳಿಸಲಿದ್ದಾರೆ. ಆದಿವಾಸಿಗಳ ಪ್ರತಿಭಟನೆಯ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಾ. ೧೬ ರಂದು (ಇಂದು) ಹೆಚ್ಚಿನ ಟ್ರಾö್ಯಕ್ಟರ್‌ಗಳನ್ನು ಭೂಮಿ ಸಮತಟ್ಟು ಕಾರ್ಯಕ್ಕೆ ಬಿಡುವ ಸಾಧ್ಯತೆ ಇದೆ.
ಅಡುಗುಂಡಿಯಲ್ಲಿ ನಡೆಯು ತ್ತಿರುವ ಪ್ರತಿಭಟನಾ ಸ್ಥಳಕ್ಕೆ ಹಲವು ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷದ ಪ್ರಮುಖರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದಿವಾಸಿಗಳ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆದಿವಾಸಿಗಳ ಮಾತಿಗೆ ಮನ್ನಣೆ ನೀಡಿದ ಹುಣಸೂರು ತಾಲೂಕಿನ ಎ.ಸಿ. ವರ್ಣಿತ್ ನೇಗಿ ಪಹಣಿ ಪತ್ರ ನೀಡಲು ಕ್ರಮ ಕೈಗೊಂಡಿದ್ದಾರೆ. ತಮ್ಮ ಸಹ ಸಿಬ್ಬಂದಿಗಳಿಗೆ ಈ ಬಗ್ಗೆ ಕಡತ ಅಂತಿಮ ಗೊಳಿಸಲು ಸೂಚನೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ಮುಂದಾಗಿರುವ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಕೈ ಬಿಡುವ ಬಗ್ಗೆ ಆದಿವಾಸಿಗಳ ಮುಖಂಡರು ಚರ್ಚೆ ನಡೆಸುತಿದ್ದಾರೆ.
ಎಸಿಗೆ ವರದಿ : ತಹಶೀಲ್ದಾರ್
ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ೧೭೭ ಕುಟುಂಬಗಳಿಗೆ ವೈಯಕ್ತಿಕ ಪಹಣಿ ಪತ್ರ ನೀಡುವ ಸಲುವಾಗಿ ಸರ್ವೆ ಕಾರ್ಯ ಸಂಪೂರ್ಣಗೊಳಿಸಲಾಗಿದೆ.
ಆರAಭಿಕ ಹಂತದಲ್ಲಿ ಸರ್ವೆ ನಂ ೩೭ ರಲ್ಲಿ ಇರುವ ೬೭ ಕುಟುಂಬಕ್ಕೆ ತಲಾ ಮೂರು ಎಕರೆ ಆರ್.ಟಿ.ಸಿ. ಕೆಲಸ ಮುಗಿದಿದ್ದು ಸೋಮವಾರ ಬೆಳಿಗ್ಗೆ ಈ ಬಗ್ಗೆ ಹುಣಸೂರು ಎಸಿ ವರ್ಣಿತ್ ನೇಗಿಯವರಿಗೆ ಕಡತ ಮಂಡಿಸಲಾಗುತ್ತದೆ. ಕಂದಾಯ ಇಲಾಖೆಯ ಅಧಿಕಾರಿಗಳು, ತಾಲೂಕು ಸರ್ವೆಯರ್, ಐಟಿಡಿಪಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸರ್ವೆ ಕಾರ್ಯ ನಡೆಸಲು ಸಹಕಾರ ನೀಡಿದ್ದಾರೆ.
ಉಳಿದ ಕುಟುಂಬಕ್ಕೆ ಆರ್.ಟಿ.ಸಿ.ನೀಡುವ ಕಾರ್ಯ ಪ್ರಗತಿಯಲ್ಲಿದೆ ಕೆಲವು ದಿನಗಳಲ್ಲಿ ಪಹಣಿ ಪತ್ರಗಳು ಫಲಾನುಭವಿಗಳ ಕೈ ಸೇರಲಿದೆ ಎಂದು ತಹಶೀಲ್ದಾರ್ ರತ್ನಂಭಿಕೆ ತಿಳಿಸಿದ್ದಾರೆ.
-ಹೆಚ್.ಕೆ. ಜಗದೀಶ್