ಕುಶಾಲನಗರ, ಮೇ ೧೪: ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತಾ. ೧೬ ರಂದು ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಶಾಲಾ ಸ್ವಚ್ಛತಾ ಕಾರ್ಯ ಮತ್ತು ಶ್ರಮದಾನದಲ್ಲಿ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರೊಡಗೂಡಿ ಶ್ರಮದಾನದಲ್ಲಿ ಪಾಲ್ಗೊಂಡು ಶಾಲಾ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

ಡಿಡಿಪಿಐ ವೇದಮೂರ್ತಿ ಶಿಕ್ಷಕರೊಡಗೂಡಿ ರಜಾವಧಿಯಲ್ಲಿ ಶಾಲಾವರಣದಲ್ಲಿ ಬೆಳೆದಿದ್ದ ಗಿಡಗಂಟಿ ಹಾಗೂ ಪಾರ್ಥೇನಿಯಂ ಮತ್ತಿತರ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಶಾಲಾವರಣವನ್ನು ಸ್ವಚ್ಛಗೊಳಿಸಲು ಕೈ ಜೋಡಿಸಿದರು.

ಶಾಲೆಯಲ್ಲಿ ಮಕ್ಕಳಿಗೆ ಪೂರೈಕೆ ಮಾಡುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಕ್ಷರ ದಾಸೋಹದ ಕೊಠಡಿ ಸೇರಿದಂತೆ ಶಾಲಾ ಪರಿಸರವನ್ನು ಪರಿಶೀಲಿಸಿ ಸ್ವಚ್ಛತೆ ಬಗ್ಗೆ ಡಿಡಿಪಿಐ ಮೆಚ್ಚುಗೆ ವ್ಯಕ್ತಪಡಿಸಿದರು. ತಾ. ೧೬ ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವದ ದಿನ ಶಿಕ್ಷಕರು ಎಸ್.ಡಿ.ಎಂ.ಸಿ.ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು , ಶಾಲೆಯ ಹಳೆ ವಿದ್ಯಾರ್ಥಿಗಳ ಜೊತೆಗೂಡಿ ಮಕ್ಕಳನ್ನು ಸಿಹಿ ನೀಡುವ ಮೂಲಕ ಸ್ವಾಗತಿಸಿ ಅವರನ್ನು ಶಾಲೆಗೆ ಬರಮಾಡಿಕೊಳ್ಳಬೇಕು ಎಂದು ಡಿಡಿಪಿಐ ವೇದಮೂರ್ತಿ ತಿಳಿಸಿದರು.

ಶಾಲೆ ಆರಂಭ ದಿನದಿಂದಲೇ ಮಕ್ಕಳಿಗೆ ಕಲಿಕಾ ಚೇತರಿಕೆ ಅನುಷ್ಠಾನಗೊಳಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ಚೇತರಿಕೆ ಮೂಡಿಸಿ ಅವರನ್ನು ಶಾಲಾ ಕಲಿಕೆಗೆ ಪ್ರೇರೇಪಣೆ ನೀಡಲು ಶಿಕ್ಷಕರು ವಿಶೇಷ ಗಮನಹರಿಸಬೇಕು.

ತಾ. ೧೬ ರಿಂದ ತಿಂಗಳ ಅಂತ್ಯದವರೆಗೆ ೧೪ ದಿನಗಳ ಕಾಲ ವಿವಿಧ ಚಟುವಟಿಕೆಗಳ ಮೂಲಕ ಹೊಸ ಕಲ್ಪನೆಯೊಂದಿಗೆ ವಿಶೇಷವಾಗಿ ನಡೆಯಲಿರುವ ಗ್ರಾಮೀಣ ಜನಪದ ಕ್ರೀಡೆ ಮತ್ತು ಚಿತ್ರ ಚಿತ್ತಾರದಿಂದ ಕೂಡಿರುವ "ಮಳೆಬಿಲ್ಲು : ಮಕ್ಕಳ ಹಬ್ಬ" ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಎನ್.ಎಸ್.ಎಸ್. ಮತ್ತು ಕ್ರೀಡಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಕ್ಲಸ್ಟರ್‌ನ ಸಿ.ಆರ್.ಪಿ.ಕೆ. ಶಾಂತಕುಮಾರ್, ಕಲಿಕಾ ಚೇತರಿಕೆ ಮತ್ತು ಮಳೆಬಿಲ್ಲು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್. ಎನ್.ಪುಟ್ಟಸ್ವಾಮಿ, ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‌ಕುಮಾರ್, ಸದಸ್ಯ ಜವರಯ್ಯ, ಹಿರಿಯ ಶಿಕ್ಷಕ ಕೆ.ಗೋಪಾಲಕೃಷ್ಣ, ಶಿಕ್ಷಕರು, ಅಡುಗೆ ಸಿಬ್ಬಂದಿ ಪಾಲ್ಗೊಂಡಿದ್ದರು.