ಗೋಣಿಕೊಪ್ಪ ವರದಿ, ಮೇ ೧೪: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಬ್ಲೇಜ್ ಮತ್ತು ಬೇಗೂರು ತಂಡಗಳು ಫೈನಲ್ ಲಗ್ಗೆ ಇಟ್ಟಿವೆ.

ಸೋಮವಾರ ಮಧ್ಯಾಹ್ನ ೩ ಗಂಟೆಗೆ ಕಪ್‌ಗಾಗಿ ಸೆಣೆಸಾಟ ನಡೆಸಲಿದ್ದು, ಸೆಮಿ ಫೈನಲ್‌ನಲ್ಲಿ ಸೋಲನುಭವಿಸಿದ ಕೋಣನಕಟ್ಟೆ ಮತ್ತು ಶಿವಾಜಿ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ.

ಬೇಗೂರು ತಂಡವು ಶಿವಾಜಿ ವಿರುದ್ದ ಶೂಟೌಟ್‌ನಲ್ಲಿ ೭-೫ ಗೋಲುಗಳ ಜಯ ಸಾಧನೆ ಮಾಡಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ ೩-೩ ಗೋಲುಗಳಿಂದ ಟೈ ಮಾಡಿಕೊಂಡಿತು. ಶೂಟೌಟ್‌ನಲ್ಲಿ ಬೇಗೂರು ೪ ಗೋಲು ಸಿಡಿಸಿತು. ಶಿವಾಜಿ ೨ ಗೋಲು ಮಾತ್ರ ದಾಖಲಿಸಿತು. ಇದರಿಂದಾಗಿ ಬೇಗೂರು ಗೆಲುವಿನ ನಗೆ ಬೀರಲು ಕಾರಣವಾಯಿತು. ೧೩, ೪೯ ಹಾಗೂ ೫೩ ನೇ ನಿಮಿಷಗಳಲ್ಲಿ ಬೇಗೂರು ತಂಡದ ಆಟಗಾರ ಎಂ. ಎಸ್. ಬೋಪಣ್ಣ ಮೂರು ಗೋಲು ಹೊಡೆದು ಮಿಂಚು ಹರಿಸಿದರು. ೩ ಮತ್ತು ೨೪ ನೇ ನಿಮಿಷಗಳಲ್ಲಿ ಶಿವಾಜಿ ತಂಡದ ವಿಕಾಸ್ ೨ ಗೋಲು ಹೊಡೆದರು. ೭ ರಲ್ಲಿ ಪುನಿತ್ ಗೋಲು ಹೊಡೆದರು.ಬ್ಲೇಜ್ ತಂಡವು ಕೋಣನಕಟ್ಟೆ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ೧೬ ನೇ ನಿಮಿಷದಲ್ಲಿ ಬ್ಲೇಜ್ ತಂಡದ ನಾಣಯ್ಯ ಗೋಲು ದಾಖಲಿಸಿ ಶುಭಾರಂಭ ಮಾಡಿದರು. ಇದರ ಬೆನ್ನಲ್ಲೆ ೨೯ ನೇ ನಿಮಿಷದಲ್ಲಿ ಪ್ರಜ್ವಲ್ ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. ಕೋಣನಕಟ್ಟೆ ಆಟಗಾರ ಅಯ್ಯಪ್ಪ ೩೯ ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಗೋಲು ಹೊಡೆದು ಹೋರಾಟ ನಡೆಸಿದರು. ನಂತರ ಗೋಲು ದಾಖಲಿಸಲಾಗದೆ ಕೋಣನಕಟ್ಟೆ ಸೋಲಿಗೆ ಶರಣಾಯಿತು.