ಸೋಮವಾರಪೇಟೆ, ಮೇ ೧೪: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿರುವ ಕಟ್ಟೆಪುರ ಗ್ರಾಮ ಸಂಪರ್ಕ ರಸ್ತೆಯು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯಕ್ಕೆ ಒಳಗಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಹೊಂಡಾ ಗುಂಡಿಗಳು ನಿರ್ಮಾಣವಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಸರ್ಕಸ್‌ನಷ್ಟೇ ತ್ರಾಸದಾಯಕವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ದುಸ್ಥಿತಿಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಳೆದ ಒಂದು ದಶಕದಿಂದೀಚೆಗೆ ರಸ್ತೆ ಇನ್ನಿಲ್ಲದಷ್ಟು ಹಾಳಾಗಿದ್ದು, ಮಳೆಗಾಲದಲ್ಲಂತೂ ಕೆರೆಯೊಳಗೆ ತೆರಳುವ ಅನುಭವವಾಗುತ್ತದೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳನ್ನು ಓಡಿಸಬೇಕಾದ ಅನಿವಾರ್ಯತೆ ಯಿರುವುದರಿಂದ ಆಗಾಗ್ಗೆ ವಾಹನಗಳು ಕೆಟ್ಟುಹೋಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಟ್ಟೆಪುರ ಗ್ರಾಮದಿಂದ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಗ್ರಾಮಕ್ಕೆ ಶಾಲಾ ವಾಹನಗಳು ಆಗಮಿಸಲು ಹಿಂದೇಟು ಹಾಕುತ್ತಿರುವುದರಿಂದ ೩ ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ತೆರಳಬೇಕಿದೆ. ಬೆಸೂರು ಮುಖ್ಯ ರಸ್ತೆಯಿಂದ ಕಟ್ಟೆಪುರ ಗ್ರಾಮಕ್ಕೆ ತೆರಳುವ ೩ ಕಿ.ಮೀ. ರಸ್ತೆಯ ದುಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಸಹ ಕಣ್ಣಿದ್ದೂ ಕುರುಡುತನ ಪ್ರದರ್ಶಿಸು ತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಸಾಲಿನ ಮಳೆಗಾಲ ಪ್ರಾರಂಭಕ್ಕೂ ಮುನ್ನ ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯೂ ಹೆಚ್ಚಿದ್ದು, ಕಾಲ್ನಡಿಗೆಯಲ್ಲಿ ತೆರಳಲು ಭಯಪಡು ವಂತಾಗಿದೆ. ತಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಟ್ಟೆಪುರದ ನಿವಾಸಿ ಸಂತೋಷ್, ಕೊಡ್ಲಿಪೇಟೆ ಕರವೇ ಕಾರ್ಯದರ್ಶಿ ವೇದಕುಮಾರ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.