ಸೋಮವಾರಪೇಟೆ, ಮೇ ೧೩ : ತಾಲೂಕಿನ ಬಹುತೇಕ ಕೃಷಿ ಗ್ರಾಮಗಳ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿಮೀರುತ್ತಿದ್ದು, ಅರಣ್ಯದಂಚಿನ ಗ್ರಾಮಗಳಲ್ಲಂತೂ ಕೃಷಿ ಫಸಲು ಕೈಸೇರಿದರೆ ಅದೃಷ್ಟ ಎಂಬAತಹ ಪರಿಸ್ಥಿತಿ ನಿರ್ಮಾಣವಾಗಿದೆ. ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಿ ಎಂಬ ಒತ್ತಡ ಕೃಷಿಕರಿಂದ ಕೇಳಿಬರುತ್ತಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಇತ್ತ ಗಮನಹರಿಸಬೇಕಿದೆ.

ವರ್ಷವಿಡೀ ಬೆವರು ಸುರಿಸಿ ಬೆಳೆದ ಬೆಳೆ ದಿನ ಬೆಳಗಾಗುವುದರಲ್ಲಿ ಕಾಡುಪ್ರಾಣಿಗಳ ಪಾಲಾಗುತ್ತಿದ್ದು, ಅಳಿದುಳಿದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಅನಿವಾರ್ಯತೆ ರೈತರಿಗೆ ಎದುರಾಗಿದೆ.

ಕಾಡಾನೆ, ಮುಳ್ಳುಹಂದಿ, ಕಾಡೆಮ್ಮೆ, ಕಾಡುಹಂದಿ ಸೇರಿದಂತೆ ಹಲವು ಪ್ರಾಣಿಗಳು ಆಹಾರಕ್ಕಾಗಿ ರೈತರ ಕೃಷಿ ಭೂಮಿಗೆ ಲಗ್ಗೆ ಇಡುತ್ತಿವೆ. ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದು, ಹೆಚ್ಚಿನ ರೈತರು ಕೃಷಿಯಿಂದ ನಷ್ಟ ಅನುಭವಿಸಿ ಕೃಷಿಯಿಂದಲೇ ಹಿಂದೆ ಸರಿಯುತ್ತಿದ್ದಾರೆ.

ಸೋಮವಾರಪೇಟೆ ವಲಯಕ್ಕೆ ಸೇರಿದಂತೆ ನಿಡ್ತ, ಜೇನುಕಲ್ಲುಬೆಟ್ಟ, ಯಡವನಾಡು ಮೀಸಲು ಅರಣ್ಯ ೫,೩೦೦ ಹೆಕ್ಟೇರ್ ಇದ್ದು, ಈ ಭಾಗದಲ್ಲಿ ಈಗಾಗಲೇ ೨೪ ಕಾಡಾನೆಗಳಿವೆ. ಅರಣ್ಯದಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಕೃಷಿಕರು ಬಾಳೆ, ಸಿಹಿಗೆಣಸು ಬೆಳೆಯುತ್ತಿದ್ದು, ಇವು ಕಾಡಾನೆಗಳಿಗೆ ಅಚ್ಚುಮೆಚ್ಚಾಗಿರುವ ಹಿನ್ನೆಲೆ ಫಸಲು ಕೈಸೇರದೆ ನಷ್ಟ ಅನುಭವಿಸುತ್ತಿದ್ದಾರೆ.

ಕೊಡ್ಲಿಪೇಟೆ ವ್ಯಾಪ್ತಿಯ ಬೆಸೂರು, ಕಟ್ಟೆಪುರ, ಹೆಬ್ಬಾಲೆ, ಚಿನ್ನೇನಹಳ್ಳಿ, ಮದಲಾಪುರ, ಹೊಸಳ್ಳಿ, ಬಾಣಾವರ, ಸಿದ್ದಲಿಂಗಪುರ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮವಾಸ್ತವ್ಯ ಮಾಡುತ್ತವೆ. ಮಾಲಂಬಿ, ನಿಡ್ತ, ಜೇನುಕಲ್ಲುಬೆಟ್ಟ ಮೀಸಲು ಅರಣ್ಯಗಳಿಂದ ಆಹಾರ ಅರಸಿ ಗ್ರಾಮಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು, ಗೆಣಸು, ಶುಂಠಿ, ಬಾಳೆಗಿಡಗಳನ್ನು ತಿಂದು ಉಳಿದ ಫಸಲನ್ನು ತುಳಿದು ನಾಶಪಡಿಸುತ್ತಿವೆ.

ಆಲೂರು-ಸಿದ್ಧಾಪುರ, ಕಣಗಾಲು, ಗೋಣಿಮರೂರು, ಯಲಕನೂರು, ಹೊಸಳ್ಳಿ, ಅರೆಯೂರು, ಅಬ್ಬೂರು ಗ್ರಾಮಗಳಲ್ಲಿ ಸಿಹಿಗೆಣಸನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಸರಿಯಾದ ಬೆಳೆ ಇಲ್ಲ. ಅಲ್ಲದೆ, ಕೊರೊನಾದಿಂದಾಗಿ ಬೆಲೆಯೂ ಇಲ್ಲದೆ ಇರುವ ಪರಿಸ್ಥಿತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದೆ.

ಐಗೂರು, ಕಾರೆಕೊಪ್ಪ, ಕುಸುಬೂರು, ಯಡವಾರೆ, ಕೂಗೂರು, ಚಿಕ್ಕಾರ, ದೊಡ್ಡಮಳ್ತೆ, ಕುಂದಳ್ಳಿ ಮುಂತಾದ ಗ್ರಾಮಗಳ ಕಡೆ ಕಾಡಾನೆಗಳು ಗ್ರಾಮಗಳಿಗೆ ಧಾಳಿ ಇಡುವುದು ಮಾಮೂಲಾಗಿದೆ.

(ಮೊದಲ ಪುಟದಿಂದ) ಕಾಫಿ ತೋಟಗಳಲ್ಲಿನ ಹಲಸಿನ ಹಣ್ಣು, ಬಾಳೆತೋಟ, ಕುಡಿಯಲು ನೀರು ಸಿಗುವ ಕೆರೆಗಳ ಸುತ್ತಮುತ್ತಲ ವ್ಯಾಪ್ತಿಯಲ್ಲಂತೂ ವನ್ಯಪ್ರಾಣಿಗಳ ಹಾವಳಿ ಅಧಿಕವಾಗಿದೆ.

ಕೃಷಿಕರು ತಾವು ಬೆಳೆದ ಭತ್ತ, ಸುವರ್ಣಗೆಡ್ಡೆ, ರಾಗಿ, ಗೆಣಸು ಸೇರಿದಂತೆ ಇತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಕೃಷಿ ಭೂಮಿಗೆ ಸರಿಯಾದ ದಾಖಲಾತಿಗಳು ಇಲ್ಲದಿರುವುದರಿಂದ ಸರ್ಕಾರದಿಂದ ಪರಿಹಾರವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ತಿ ದಾಖಲಾತಿಯ ನಿಯಮವನ್ನು ಸರಳೀಕರಿಸಿ ಬೆಳೆಹಾನಿಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ಕೊಟ್ಟಾಗ ಮಾತ್ರ ಕೃಷಿಕರು ಸಂಕಷ್ಟದಿAದ ಹೊರಬರುತ್ತಾರೆ. ಭೂಮಿ ಒಳಗಿರುವ ಫಸಲಿಗೆ ಪರಿಹಾರವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸುವುದರಿಂದ ಕೃಷಿ ಮಾಡುವುದೇ ಬೇಡ ಎಂಬ ಸ್ಥಿತಿಗೆ ರೈತರು ಬಂದಿದ್ದಾರೆ ಎಂದು ಗಣಗೂರು ಗ್ರಾಮದ ಕೃಷಿಕ ಚಂದ್ರಶೇಖರ್ ತಿಳಿಸಿದ್ದಾರೆ.

ಬಾಣಾವರ, ಆಲೂರು, ಕಣಗಾಲು, ಭುವಂಗಾಲ, ಗೋಣಿಮರೂರು, ಅರೆಯೂರು, ಅಬ್ಬೂರು, ಯಲಕನೂರು, ಹೊಸಳ್ಳಿ, ಸಿದ್ಧಲಿಂಗಪುರ, ಅಳಿಲುಗುಪ್ಪೆ, ಬಸಿರಗುಪ್ಪೆ, ತೊರೆನೂರು, ಶಿರಂಗಾಲ ಸುತ್ತಮುತ್ತಲ ಗ್ರಾಮಗಳಲ್ಲಿ ಶುಂಠಿ, ಕ್ಯಾನೆಗೆಡ್ಡೆ, ಸಿಹಿಗೆಣಸು ಬೆಳೆಯುವುದಕ್ಕೆ ಸೂಕ್ತ ಪ್ರದೇಶವಾಗಿದ್ದು, ರೈತರ ಅಧಿಕ ಲಾಭದಾಯಕ ಬೆಳೆಯಾಗಿದೆ. ಕಾಡಾನೆಗಳ ಹಾವಳಿಯಿದ್ದರೂ ಇಲ್ಲಿನ ಜನ ಇದನ್ನೇ ಬೆಳೆಯಬೇಕು. ಆದರೆ, ಮಣ್ಣಿನೊಳಗಿರುವ ಬೆಳೆ ಹಾನಿಯಾದರೆ ಅರಣ್ಯ ಇಲಾಖೆಯಿಂದ ಪರಿಹಾರ ಇಲ್ಲ ಎಂದು ಹೇಳುವುದು ಅಮಾನವೀಯವಾದುದು ಎಂದು ಅರಸಿನಕುಪ್ಪೆ ಗ್ರಾಮದ ಪ್ರಕಾಶ್, ಲವಿನ್, ಧನು, ಮೋಹನ್, ರಮೇಶ್ ಸೇರಿದಂತೆ ಇತರ ರೈತರು ದೂರಿದ್ದಾರೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಸೋಲಾರ್ ಬೇಲಿ ಹಾಗೂ ಕಾಡಿನ ಸುತ್ತ ಕಂದಕ ತೋಡಿರುವುದರಿಂದ ಸ್ವಲ್ಪ ಮಟ್ಟಿಗೆ ಕಾಡಾನೆಗಳು ಗ್ರಾಮಗಳಿಗೆ ನುಗ್ಗುವುದು ಕಡಿಮೆಯಾಗಿದೆ ಎಂದು ದಿನೇಶ್ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕಾರ ಗ್ರಾಮದಿಂದ ದೊಡ್ಡಮಳ್ತೆ ಮಾರ್ಗವಾಗಿ ವಳಗುಂದವರೆಗೆ ಅರಣ್ಯದಂಚಿನಲ್ಲಿ ನಾಲ್ಕು ಕಿ.ಮೀ. ಆನೆ ಕಂದಕ ನಿರ್ಮಿಸಲಾಗಿದೆ. ಕೆಲ ಭಾಗದಲ್ಲಿ ಕಲ್ಲುಬಂಡೆ ಸಿಕ್ಕಿದ ಕಡೆ ಕಂದಕ ಮಾಡಿಲ್ಲ. ಈಗ ಕೆಲ ಕಡೆ ಕಂದಕದಲ್ಲಿ ಹೂಳು ತುಂಬಿರುವ ಕಾರಣ ಕಾಡಾನೆಗಳು ಕಂದಕ ದಾಟಿ ಗ್ರಾಮ ಸೇರುತ್ತಿವೆ. ಕಂದಕ ದುರಸ್ತಿಪಡಿಸದ ಹೊರತು ಕಾಡಾನೆಗಳ ಕಾಟವನ್ನು ತಡೆಯಲು ಸಾಧ್ಯವಿಲ್ಲ.

ಚಿಕ್ಕಾರ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಹಾಕಿರುವ ಮುಳ್ಳು ಕಂಬಗಳನ್ನು ಕಾಡಾನೆಗಳು ಬಗ್ಗಿಸಿ ಚಾಕಚಕ್ಯತೆಯಿಂದ ದಾಟಿ, ಗ್ರಾಮ ಸೇರುತ್ತಿವೆ. ಕಾಜೂರು ಸಮೀಪ ಟಾಟಾ ಕಾಫಿ ತೋಟದ ಬೇಲಿಗೆ ಸೋಲಾರ್ ಬೇಲಿ ನಿರ್ಮಿಸಲಾಗಿದೆ. ಕಾಜೂರು, ಯಡವಾರೆ, ಸಜ್ಜಳ್ಳಿ ಭಾಗದಲ್ಲೂ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಕಾಡಾನೆಗಳು ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿಕೊಂಡು ಕೃಷಿ ಭೂಮಿಗೆ ಧಾಳಿ ಮಾಡುತ್ತಿವೆ.

ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ಸೂಕ್ತ ನೀರು ಹಾಗೂ ಆಹಾರ ಸಿಗುವಂತೆ ನೋಡಿಕೊಂಡಲ್ಲಿ ಕಾಡಾನೆಗಳು ಕೃಷಿ ಜಮೀನಿಗೆ ಧಾಳಿ ಮಾಡುವುದು ಕಡಿಮೆಯಾಗುತ್ತದೆ. ಇಲಾಖಾಧಿಕಾರಿಗಳು ಇಂತಹ ಯೋಜನೆಗಳನ್ನು ಮಾಡುವುದನ್ನು ಬಿಟ್ಟು ತೇಗದಂತಹ ಮರ ಗಿಡಗಳನ್ನು ಬೆಳೆಸಿದ್ದಾರೆ. ಈ ಮರದ ಅಡಿಯಲ್ಲಿ ಪರಿಸರಕ್ಕೆ ಮಾರಕವಾದ ಲಂಟಾನ ಹೊರತುಪಡಿಸಿದರೆ ಬೇರಿನ್ಯಾವ ಗಿಡಗಳೂ ಬೆಳೆಯುವುದಿಲ್ಲ. ಅರಣ್ಯದಲ್ಲಿ ಮೊದಲು ಕಾಡುಪ್ರಾಣಿಗಳಿಗೆ ಸರಿಯಾದ ವ್ಯವಸ್ಥೆಯಾಗಬೇಕಿದೆ ಎಂದು ಯಡವಾರೆ ಗ್ರಾಮದ ಕಾಫಿ ಬೆಳೆಗಾರ ಅಶೋಕ್ ಅಭಿಪ್ರಾಯಿಸಿದ್ದಾರೆ.

ಅರಣ್ಯ ಇಲಾಖೆಯ ವತಿಯಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಕಾಜೂರು, ಬಾಣಾವರ, ಚಿನ್ನೇನಹಳ್ಳಿಯಲ್ಲಿ ಕಾಡಾನೆ ಓಡಿಸುವ ಅರಣ್ಯ ಇಲಾಖೆಯ ಆರ್.ಆರ್.ಟಿ ತಂಡವಿದೆ. ರೈತರು ಮಾಹಿತಿ ನೀಡಿದರೆ ಇಲಾಖೆ ಸಹಾಯ ಮಾಡಲಿದೆ ಎಂದು ಡಿ.ಆರ್.ಎಫ್.ಓ. ಮನು ತಿಳಿಸಿದ್ದಾರೆ. - ವಿಜಯ್