ಗೋಣಿಕೊಪ್ಪ ವರದಿ, ಮೇ ೧೨: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಚಿತ್ತ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಗೋಣಿಕೊಪ್ಪದಲ್ಲಿ ಪ್ರತೀ ತಿಂಗಳ ಮೂರನೇ ಭಾನುವಾರ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವದು ಎಂದು ಯೂತ್‌ಮೂವ್‌ಮೆಂಟ್ ಖಜಾಂಚಿ ಡಾ. ಕೆ. ಎನ್. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗೋಣಿಕೊಪ್ಪ ವೆಲ್‌ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಶಿಬಿರ ನಡೆಯಲಿದೆ. ತಾ. ೧೫ ರಂದು ಬೆಳಗ್ಗೆ ೧೦ ಗಂಟೆಗೆ ಉದ್ಘಾಟಿಸಲಾಗುತ್ತದೆ. ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಸಲಹೆ, ಚಿಕಿತ್ಸೆ ಹಾಗೂ ಔಷಧಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಾನಸಿಕ ತೊಂದರೆಗಳು, ಬುದ್ಧಿ ಮಾಂದ್ಯತೆ, ಮೂರ್ಚೆರೋಗ, ನಿದ್ರಾಹೀನತೆ, ಮದ್ಯಪಾನ ಹಾಗೂ ಇತರೆ ದುಶ್ಚಟಗಳು, ದೀರ್ಘಕಾಲದ ಮೈ, ಕೈ ನೋವು, ಮಕ್ಕಳಲ್ಲಿ ಹಠಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಈ ರೀತಿಯ ತೊಂದರೆಯಲ್ಲಿರುವವರು ಸಂಪರ್ಕಿಸಬಹುದು.

ಮೈಸೂರು ವ್ಯಾಪ್ತಿಯಲ್ಲಿ ಮಾನಸಿಕ ಆರೋಗ್ಯದ ಲವಲವಿಕೆ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಇದನ್ನು ಕೊಡಗು ಜಿಲ್ಲೆಗೂ ವಿಸ್ತರಿಸಲಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆ ರೋಗಿಗಳಿಗೆ ನಿರಂತರ ಚಿಕಿತ್ಸೆ, ಮಾರ್ಗದರ್ಶನ, ಸಲಹೆ ನೀಡುವ ಅನಿವಾರ್ಯತೆ ಇರುವುದರಿಂದ ತಿಂಗಳಿಗೊಮ್ಮೆ ಶಿಬಿರವನ್ನು ಕಡ್ಡಾಯಗೊಳಿಸಲಾಗಿದೆ. ಮೈಸೂರು ಜೆಎಸ್‌ಎಸ್ ಆಸ್ಪತ್ರೆ ವೈದ್ಯರಾದ ಡಾ. ಶಿವಾನಂದ ತಪಾಸಣೆ ನಡೆಸುತ್ತಾರೆ. ಎಲ್ಲವೂ ಉಚಿತ ಕಾರ್ಯಕ್ರಮವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಮತಿ ಕೂಡ ದೊರೆತಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಅಂಕಚಾರಿ, ಬಸಪ್ಪ ಇದ್ದರು.