ಕೂಡಿಗೆ, ಮೇ ೧೩: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಮಧ್ಯ ಭಾಗದಲ್ಲಿರುವ ಜಿಲ್ಲೆಯ ಪ್ರಥಮ ಕಾವೇರಿ ಹ್ಯಾಂಡ್‌ಲೂA ಕಟ್ಟಡವು ಶೀತಲ ವ್ಯವಸ್ಥೆಯಲ್ಲಿ ಇರುವುದರಿಂದ ಕೈಮಗ್ಗದಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಯದಂತೆ ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ವತಿಯಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ನೂತನವಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ವತಿಯಿಂದ ಕಟ್ಟಡದ ನಿರ್ಮಾಣಕ್ಕೆ ರೂ. ೪೦ ಲಕ್ಷ ಪ್ರಸ್ತಾವನೆಯನ್ನು ಸರಕಾರಕ್ಕೆ ಇಲಾಖೆಯ ಮೂಲಕ ಸಲ್ಲಿಸಲಾಗಿದೆ.

ಶಿರಂಗಾಲ ಕಾವೇರಿ ಕೈಮಗ್ಗ ಘಟಕದ ಕಟ್ಟಡವು ಬಾರಿ ಹಳೆದಾಗಿದ್ದು, ಗೋಡೆಗಳು ಬಿರುಕುಗೊಂಡಿದ್ದವು. ಕಟ್ಟಡ ಶಿಥಿಲವಾಗಿರುವುದರಿಂದ ರಾಜ್ಯಮಟ್ಟದ ಜವಳಿ ಮತ್ತು ಕೈಮಗ್ಗ ಇಲಾಖೆಯ ಅಧಿಕಾರಿ ತಂಡ ಶಿರಂಗಾಲದ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಕಟ್ಟಡವನ್ನು ಪರಿಶೀಲನೆ ನಡೆಸಿ ನೂತನವಾಗಿ ಕಟ್ಟಡ ಕಟ್ಟಲು ಪ್ರಸ್ತಾವನೆಯನ್ನು ಕಳುಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಈಗಾಗಲೇ ಇಲಾಖೆಯ ನಿಯಮನುಸಾರವಾಗಿ ರೂ. ೪೦ ಲಕ್ಷದ ಕಟ್ಟಡ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಜವಳಿ ಮತ್ತು ನೇಯ್ಗೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾವಂತ ಯುವಕ-ಯುವತಿಯರಿಗೆ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ಅನುಕೂಲವಾಗುವ ದೃಷ್ಟಿಯಿಂದ ನೂತನ ತಂತ್ರಜ್ಞಾನದ ವಿದ್ಯುತ್ ಕೈಮಗ್ಗ ಯಂತ್ರ ಅಳವಡಿಕೆ ಮಾಡುವ ಮೂಲಕ ಹೊಸ ಬಟ್ಟೆಗಳ ನೇಯ್ಗೆಗೆ ಸಹಕಾರ ನೀಡಬೇಕೆಂದು ಗ್ರಾಮದ ನಿರುದ್ಯೋಗಿ ಯುವಕರ ಒತ್ತಾಯವಾಗಿದೆ.