ಮಡಿಕೇರಿ, ಮೇ ೧೩: ನೆರೆಯ ಕೇರಳ ರಾಜ್ಯದಲ್ಲಿ ಪ್ರಸ್ತುತ ಟೊಮೆಟೊ ಜ್ವರ ಎಂಬ ಹೊಸ ಸ್ವರೂಪದ ಜ್ವರವೊಂದು ಕಾಣಿಸಿಕೊಂಡಿದ್ದು, ಈ ರೋಗ ಲಕ್ಷಣ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಮೂಲಕ ಎಚ್ಚರ ವಹಿಸಲಾಗುತ್ತಿದೆ. ಕೊಡಗು ಗಡಿ ಜಿಲ್ಲೆಯಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವನ್ನು ಆರೋಗ್ಯ ಇಲಾಖೆ ವಹಿಸುತ್ತಿದೆ.

ಕೇರಳ ರಾಜ್ಯದಲ್ಲಿ ಮಕ್ಕಳಲ್ಲಿ ಈ ರೋಗಬಾಧೆ ಕಾಣಿಸಿಕೊಳ್ಳುತ್ತಿದೆ. ಕೇರಳದಲ್ಲಿನ ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಸೂಕ್ತ ಎಚ್ಚರ ವಹಿಸಲು ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕೂಡ ಸೂಚನೆ ನೀಡಿದ್ದಾರೆ. ಶಂಕಿತ ಪ್ರಕರಣಗಳ ತಪಾಸಣೆ, ಆಸ್ಪತ್ರೆಗಳ ಓಪಿಡಿ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ.

ಗಡಿಯಲ್ಲಿ ತಪಾಸಣೆ

ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವ ಗಡಿಭಾಗದಲ್ಲಿ ಇಲಾಖಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ತಾಲೂಕುಗಳ ವೈದ್ಯಾಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂಬದಾಗಿ ಡಿಎಚ್‌ಓ ಡಾ. ವೆಂಕಟೇಶ್ ಅವರೂ ತಿಳಿಸಿದ್ದಾರೆ. ಗಡಿಯಲ್ಲಿ ಕೇರಳದಿಂದ ಬರುವ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ಈ ತನಕ ಜಿಲ್ಲೆಯಲ್ಲಿ ಯಾವ ಪ್ರಕರಣವೂ ಪತ್ತೆಯಾಗಿಲ್ಲ.

ವಾಹನಗಳ ತಪಾಸಣೆ ಮುಂದುವರಿಯಲಿದೆ ಜ್ವರದೊಂದಿಗೆ ಮಕ್ಕಳ ದೇಹದಲ್ಲಿ ಟೊಮೆಟೊ ರೀತಿಯ ಕೆಂಪುಗುಳ್ಳೆಗಳು ಕಾಣಿಸಿಕೊಳ್ಳುವದೂ, ಸುಸ್ತು, ಬಾಯಾರಿಕೆ ಇದರ ಲಕ್ಷಣವಾಗಿದೆ. ಈ ಬಗ್ಗೆ ಎಚ್ಚರದಿಂದಿರುವAತೆ ಅವರು ಕೋರಿದ್ದಾರೆ.