ಕೂಡಿಗೆ, ಮೇ ೧೨: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕರೆ ಸಮೀಪದಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದ ಜೇನು ಕುರುಬರ ರಾಜಣ್ಣ ನಾಗಮ್ಮ ಅವರ ಜೋಪಡಿ ಮಳೆಗೆ ಕುಸಿದು ಹೋಗಿದ್ದ ಕುರಿತು ‘ಶಕ್ತಿ’ಯಲ್ಲಿ ಈ ಹಿಂದೆ ‘ಇದ್ದ ಜೋಪಡಿ ನೆಲಸಮ-ಕೊಟ್ಟಿಗೆಯೇ ಇದೀಗ ಆಶ್ರಯ’. ‘ನೊಂದ ಕುಟುಂಬಕ್ಕೆ ಬೇಕಿದೆ ಆಡಳಿತ ನೆರವು’ ಎಂಬ ವರದಿ ಪ್ರಕಟ ಗೊಂಡಿತ್ತು. ವರದಿಗೆ ಸ್ಪಂದಿಸಿ ಬಸವನತ್ತೂರು ಗ್ರಾಮದ ನಾಗಮ್ಮ ಎಂಬವರಿಗೆ ರೋಟರಿ ವತಿಯಿಂದ ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ.

ಕುಶಾಲನಗರ ರೋಟರಿ ವಲಯ-೬ ರೋಟರಿ ಜಿಲ್ಲೆ ಕುಶಾಲನಗರ ರೋಟರಿ ವತಿಯಿಂದ ನಿರ್ಮಿಸಲಾದ ರೋಟರಿ ಹೌಸ್ ನಂ. ೧ ಮನೆಯ ಉದ್ಘಾಟನೆಯನ್ನು ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಸೇವಾ ಮನೋಭಾವದ ಮೂಲಕ ಶಿಕ್ಷಣ, ಆರೋಗ್ಯ, ಅತ್ಯವಶ್ಯಕ ಮೂಲಭೂತ ಸೌಕರ್ಯಗಳನ್ನು ಸೇವೆಯಿಂದ ಜೀವನದ ಬದಲಾವಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ವಹಿಸಿದರು. ಮುಖ್ಯ ಅತಿಥಿಯಾಗಿ ವಲಯ ೬ರ ಸಹಾಯಕ ರಾಜ್ಯಪಾಲ ಹೆಚ್.ಟಿ. ಅನಿಲ್, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಬಿ.ಜಿ. ಇಂದಿರಾ ರಮೇಶ್, ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್ ಗ್ರಾ.ಪಂ. ಸದಸ್ಯರಾದ ಫಿಲೋಮಿನಾ ಜಾರ್ಜ್, ಕೆ.ಎಂ. ಚಂದ್ರಶೇಖರ್, ಗೌರಮ್ಮ, ಕುಶಾಲನಗರ ರೋಟರಿ ಕಾರ್ಯದರ್ಶಿ ರಿಚರ್ಡ್ ಡಿಸೋಜ, ರೋಟರಿ ಸದಸ್ಯ ಉಮಾಶಂಕರ್ ಉಪಸ್ಥಿತರಿದ್ದರು.

ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅವರು ನಾಗಮ್ಮ ಅವರಿಗೆ ಮನೆಯ ಕೀ ಹಸ್ತಾಂತರಿಸಿದರು. ರೋಟರಿ ಸದಸ್ಯ ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿ, ರಂಗಸ್ವಾಮಿ ಸ್ವಾಗತಿಸಿ, ಡಿಸೋಜ ವಂದಿಸಿದರು.