ಕಾಂಗ್ರೆಸ್ ಆರೋಪ
ಮಡಿಕೇರಿ, ಮೇ ೧೩: ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭಾಗಿಯಾಗಿರುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದಿರುವ ಕಾಂಗ್ರೆಸ್, ಅಧಿಕಾರಿಗಳ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಸಚಿವರನ್ನು ಭೇಟಿಯಾಗಿ ಅಧಿಕಾರಿಗಳು ವಿವರಣೆ ನೀಡುವುದು, ಚರ್ಚಿಸುವುದು ಸಾಮಾನ್ಯ. ಅದಕ್ಕಾಗಿ ಸಚಿವರು ವಾಸ್ತವ್ಯ ಹೂಡಿರುವ ಕಡೆ ಅಧಿಕಾರಿಗಳು ಹೋಗಿ ಭೇಟಿ ಮಾಡುತ್ತಾರೆ. ಆದರೆ ರಾಜಕೀಯ ಪಕ್ಷದ ಪ್ರಚಾರ ಸಭೆಯಲ್ಲಿ ಸಂಘಟಕರ ರೀತಿ ಕುಳಿತು ಬಿಜೆಪಿ ಮುಖಂಡರನ್ನು ಸಂತೃಪ್ತಗೊಳಿಸಿದ್ದು ಕಾನೂನು ಬಾಹಿರವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರ್ವಾಧಿಕಾರಿ ವ್ಯವಸ್ಥೆಯತ್ತ ಕೊಂಡೊಯ್ಯುವ ಹುನ್ನಾರವಾಗಿದೆ. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಕರೆಸಿರುವ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕಾರ್ಯಕ್ರಮದ ಛಾಯಾಚಿತ್ರ, ವೀಡಿಯೋ ಕ್ಲಿಪಿಂಗ್ ಸಂಗ್ರಹಿಸಲಾಗಿದ್ದು ರಾಜ್ಯಪಾಲರಿಗೂ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದಾಖಲೆಯೊಂದಿಗೆ ದೂರು ಸಲ್ಲಿಸಲಾಗುವುದು. ಉಚ್ಚ ನ್ಯಾಯಾಲಯದಲ್ಲಿ ಕೂಡ ದಾವೆ ಹೂಡಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.