ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಮೇ ೧೨: ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ ಅವರು, "ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು ಸಂರಕ್ಷಣಾ ವಿಧೇಯಕವನ್ನು ನಾವು ವಿಧಾನಸಭೆಯಲ್ಲಿ ಅಂಗೀಕರಿಸಿದ್ದೇವೆ. ಕೆಲವು ಕಾರಣಗಳಿಂದ ಅದು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಇಂದು ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಮತಾಂತರ ನಿಷೇಧ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿತ್ತು. ವಿಧಾನಸಭೆಯ ಒಪ್ಪಿಗೆ ಪಡೆದಿದ್ದ ಈ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಿ ಅಂಗೀಕರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಈಗ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ರಾಜ್ಯಸಭೆಯ ೫೭ ಸ್ಥಾನಗಳಿಗೆ ಚುನಾವಣೆ ಘೋಷಣೆ
ಬೆಂಗಳೂರು, ಮೇ ೧೨: ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು ೫೭ ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂನ್ ೧೦ ರಂದು ಮತದಾನ ಪ್ರಕ್ರಿಯೆ ನಡೆದರೆ, ಅಂದೇ ಮತ ಎಣಿಕೆ ಸಹ ನಡೆಯಲಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೈ ರಾಮ್ ರಮೇಶ್, ಕೆ.ಸಿ. ರಾಮಮೂರ್ತಿ, ಆಸ್ಕರ್ ಫರ್ನಾಂಡಿಸ್ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸದಸ್ಯತ್ವ ಜೂನ್ ೬ ರಂದು ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟç, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾ ಖಂಡ, ಬಿಹಾರ, ಜಾರ್ಖಂಡ್ ಮತ್ತು ಹರಿಯಾಣದ ಖಾಲಿ ಸ್ಥಾನಗಳಿಗೂ ಜೂನ್ ೧೦ ರಂದು ಚುನಾವಣೆ ನಡೆಯಲಿದೆ. ಒಟ್ಟು ೧೫ ರಾಜ್ಯಗಳ ೫೭ ಸಂಸದರ ಸದಸ್ಯತ್ವ ಜೂನ್ ೨೬ ರಿಂದ ಆಗಸ್ಟ್ ೧ರ ಮಧ್ಯಾವಧಿಯಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತೆರುವಾಗಲಿರುವ ೫೭ ಸ್ಥಾನಗಳಿಗೆ ಜೂನ್ ೧೦ ಶುಕ್ರವಾರದಂದು ಚುನಾವಣೆ ನಡೆಯಲಿದೆ. ತಾ. ೨೪ ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಜೂನ್ ೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್ ೩ ಕೊನೆಯ ದಿನವಾಗಿದೆ. ಜೂನ್ ೧೦ ರಂದು ಫಲಿತಾಂಶ ಪ್ರಕಟವಾಗಲಿದೆ.
ಪಿಎಸ್‌ಐ ನೇಮಕಾತಿ ಹಗರಣ: ಶಿಕ್ಷಕನನ್ನು ವಶಕ್ಕೆ ಪಡೆದ ಸಿಐಡಿ
ಹುಬ್ಬಳ್ಳಿ, ಮೇ ೧೨: ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಧಾರವಾಡದ ಖ್ಯಾತ ಕೋಚಿಂಗ್ ಸೆಂಟರ್‌ನ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಪ್ತಾಪುರಭಾವಿ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ ಮಂಗಳವಾರ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದ್ದು, ಬುಧವಾರವೂ ವಿಚಾರಣೆ ಮುಂದುವರೆದಿದೆ. ಹÀಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಲ್ಲಿ ಒಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೋಚಿಂಗ್ ತರಗತಿಗಳು ಮತ್ತು ಪರೀಕ್ಷೆಗೆ ತರಬೇತಿ ಪಡೆದ ಹಲವಾರು ಜನರನ್ನು ವಿಚಾರಣೆಗಾಗಿ ಕರೆಸಲಾಗಿದೆ. ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು, ಈಗ ವಶಕ್ಕೆ ಪಡೆದಿರುವ ಶಿಕ್ಷಕರಿಂದ ಪರೀಕ್ಷೆಯಲ್ಲಿ ಸಹಾಯ ಪಡೆದಿರುವುದಾಗಿ ವರದಿಯಾಗಿದೆ. ಧಾರವಾಡದಲ್ಲಿ ಹಲವಾರು ಪರೀಕ್ಷಾ ತರಬೇತಿ ಕೇಂದ್ರಗಳಿವೆ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ವಿದ್ಯಾರ್ಥಿಗಳು ತರಬೇತಿಗಾಗಿ ಇಲ್ಲಿಗೆ ಬರುತ್ತಾರೆ. ಕೋಚಿಂಗ್ ಸೆಂಟರ್ ಮಾಲೀಕರೊಂದಿಗೆ ನಂಟು ಹೊಂದಿರುವ ಕೆಲವು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕಾನೂನುಬಾಹಿರವಾಗಿ ಏನನ್ನಾದರೂ ಮಾಡಿರಬಹುದು ಎಂಬ ಶಂಕೆ ಇದೆ. ಆದರೆ ಅದಕ್ಕೆ ಪೂರಕವಾದ ಯಾವುದೇ ಪುರಾವೆಗಳು ಕಂಡುಬAದಿಲ್ಲ. ವಿಚಾರಣೆ ನಂತರ ಶಿಕ್ಷಕನನ್ನು ಬಿಟ್ಟು ಕಳುಹಿಸಲಾಗಿದೆ. ಆದರೆ ಅಗತ್ಯವಿದ್ದರೆ ವಿಚಾರಣೆಗಾಗಿ ಮತ್ತೆ ಕರೆಯಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.