ಕೂಡಿಗೆ, ಮೇ ೧೨: ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿಯ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಅಂಗವಾಗಿ ಬಸವೇಶ್ವರ ಉತ್ಸವ ಆಚರಣೆ ಮಾಡಲಾಯಿತು.

ಬಸವೇಶ್ವರ ಉತ್ಸವ ಅಂಗವಾಗಿ ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಬಸವಣ್ಣ ದೇವರಿಗೆ ವಿಶೇಷ ಪೂಜೆ, ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ರಾಘವೇಂದ್ರ ಆಚಾರ್ ಅವರ ತಂಡ ನೆರವೇರಿಸಿತು.

ನಂತರ ವಿದ್ಯುತ್ ದೀಪ ಅಲಂಕೃತವಾದ ಟ್ರಾö್ಯಕ್ಟರ್‌ನಲ್ಲಿ ಶ್ರೀ ಜೋಡಿ ಬಸವೇಶ್ವರ ದೇವರ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೂಡಿಗೆ ಸರ್ಕಲ್, ಕೊಪ್ಪಲು, ಹೆಗ್ಗಡಹಳ್ಳಿ, ಕೋಟೆಯ ಮಾರ್ಗವಾಗಿ ಸ್ವಸ್ಥಳಕ್ಕೆ ಬಂದು ಸೇರಿತು.

ಬಸವೇಶ್ವರ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಮಂಡ್ಯ ಜಿಲ್ಲೆಯ ಕಾರಸವಾಡಿ ಡೊಳ್ಳು ಕುಣಿತ ತಂಡ, ಪಾಂಡುಪುರದ ಪೂಜಾ ಕುಣಿತ, ರಾಮನಗರ ಜಿಲ್ಲೆಯ ವೀರಭದ್ರನ ಕುಣಿತ ಸೇರಿದಂತೆ ಮಂಗಳ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಜೊತೆಗೆ ಆಕರ್ಷಕ ಮದ್ದು ಗುಂಡುಗಳು ಸಿಡಿಸುವಿಕೆ ಕೂಡ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಗಿರೀಶ್, ಉಪಾಧ್ಯಕ್ಷ ಕೆ.ಪಿ. ಪ್ರಕಾಶ್, ಕಾರ್ಯದರ್ಶಿ ಗುರುಪಾದಸ್ವಾಮಿ ಆರಾಧ್ಯ, ಸಹ ಕಾರ್ಯದರ್ಶಿ ಕೆ.ಜಿ. ರಾಜಶೇಖರ, ಸಲಹೆಗಾರರಾದ ಕೆ.ಟಿ. ಶ್ರೀನಿವಾಸ, ಕೆ.ಕೆ. ಸೋಮಶೇಖರ್, ಕೆ.ಎಸ್. ಚಂದ್ರಶೇಖರ್, ಕೆ.ಪಿ. ಸೋಮಣ್ಣ, ಪ್ರಕಾಶ್, ಈಶ್ವರ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.