ವೀರಾಜಪೇಟೆ, ಮೇ ೧೨: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯದೊಂದಿಗೆ ಮೂರ್ನಾಡಿನ ಎಂ. ಬಾಡಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೩ ರಿಂದ ೧೯ ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ೨ ವರ್ಷಗಳಿಂದ ಕೋವಿಡ್ ಮಾರಕ ರೋಗದ ಕಾರಣದಿಂದಾಗಿ ಶಿಬಿರವನ್ನು ಏರ್ಪಡಿಸಲಾಗಲಿಲ್ಲ. ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವುದು ಹಾಗೂ ಕೋವಿಡ್ನಂತಹ ಮಾರಕ ರೋಗಗಳು ಬಂದಾಗ ತೆಗೆದುಕೊಳ್ಳುವ ಮುನ್ನಚ್ಚರಿಕೆ ಹಾಗೂ ಅದನ್ನು ಬಾರದಂತೆ ತಡೆಗಟ್ಟುವ ಮಾರ್ಗವನ್ನು ಗ್ರಾಮಸ್ಥರಿಗೆ ತಿಳಿಸಿಕೊಡುವುದು ಹಾಗೂ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಧೈರ್ಯಗೆಡದೆ ಜೀವನೋತ್ಸಾಹವನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಶಿಬಿರದ ಪ್ರಮುಖ ಧ್ಯೇಯವಾಗಿದೆ. ಎಂದು ತಿಳಿಸಿದ್ದಾರೆ.
ತಾ. ೧೩ರಂದು ಅಪರಾಹ್ನ ೨.೩೦ ಕ್ಕೆ ಶಿಬಿರದ ಉದ್ಘಾಟನೆಯನ್ನು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ನೆರವೇರಿಸಲಿದ್ದಾರೆ. ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ದಿವಾಕರ ಕೆ.ಜೆ. ಅವರು ಶಿಬಿರದ ಕುರಿತು ಭಾಷಣ ಮಾಡಲಿದ್ದಾರೆ.
ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ವೀರಾಜಪೇಟೆಯ ಸೆಂಟೆನ್ಸ್ ಪದವಿ ಕಾಲೇಜಿನ ರಾಷ್ಟೀಯ ಸೇವಾ ಯೋಜನಾಧಿಕಾರಿ ಅಜಯ್ ಹೆಚ್.ಆರ್., ಮಡಿಕೇರಿ ವಿಮಾ ಮತ್ತು ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್, ವೀರಾಜಪೇಟೆಯ ವೈದ್ಯರು ಹಾಗೂ ಪಕ್ಷಿತಜ್ಞ ಡಾ. ಎಸ್.ವಿ. ನರಸಿಂಹನ್, ಶಕ್ತಿ ದಿನಪತ್ರಿಕೆಯ ಉಪಸಂಪಾದಕ ಕುಡೆಕಲ್ ಸಂತೋಷ್, ಕೂಡು ಮಂಗಳೂರಿನ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಂಕುಮಾರ್, ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಗೀತಾ ನಾಯ್ಡು, ಕಿಗ್ಗಾಲು ಗ್ರಾಮದ ಸಾಹಿತಿ ಕಿಗ್ಗಾಲು ಎನ್. ಗಿರೀಶ್, ಮಡಿಕೇರಿಯ ದಂತವೈದ್ಯೆ ಅನುಶ್ರೀ ಅನಂತಶಯನ, ಶಕ್ತಿ ದಿನಪತ್ರಿಕೆಯ ವ್ಯವಸ್ಥಾಪಕಿ ಪ್ರಜ್ಞಾ ಜಿ.ಆರ್, ಮಡಿಕೇರಿಯ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಭಾಗವಹಿಸಲಿದ್ದಾರೆ.
ತಾ. ೧೯ ರ ಪೂರ್ವಾಹ್ನ ೧೦.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದ ಭಾಷಣವನ್ನು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಹೆಚ್.ಟಿ. ಮಾಡಲಿದ್ದಾರೆ.
ಇದೇ ಸಂದರ್ಭ ಶಿಬಿರಾರ್ಥಿ ಗಳಿಂದ ಮೂರ್ನಾಡಿನವರೆಗೆ ರಸ್ತೆಯ ಇಕ್ಕೆಲಗಳಲ್ಲೂ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದು ಪಟ್ಟಡ ಪೂವಣ್ಣ ತಿಳಿಸಿದ್ದಾರೆ.