ಸೋಮವಾರಪೇಟೆ, ಮೇ ೧೨: ಬೈಕ್ ಮತ್ತು ಸ್ಕೂಟರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಯೋಧ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರೂರು ಮಾರುತಿ ಶೋ ರೂಂ ಎದುರಿನ ಸೋಮವಾರಪೇಟೆ, ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಯಡವಾರೆ ಗ್ರಾಮದ ಕಲ್ಲುಗದ್ದೆ ಮನೆ ಬಾಲಕೃಷ್ಣ ಎಂಬವರ ಪುತ್ರ, ಸಿಆರ್‌ಪಿಎಫ್ ಯೋಧ ಕೆ.ಬಿ. ಡಾಲು, ಕಾಗಡಿಕಟ್ಟೆ ಗ್ರಾಮದ ಮನೋಜ್‌ಭಟ್ ಹಾಗೂ ಪೈಂಟರ್ ಆಸೀಫ್ ಗಾಯಗೊಂಡವರು.

ಸ್ಕೂಟರ್ ಚಾಲಿಸುತ್ತಿದ್ದ ಯೋಧ ಡಾಲು ತಲೆಗೆ ತೀವ್ರ ಗಾಯವಾಗಿದ್ದು, ಕಣ್ಣಿನ ಭಾಗಕ್ಕೆ ಪೆಟ್ಟಾಗಿದೆ. ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೈಕ್‌ನಲ್ಲಿದ್ದ ಆಸೀಫ್ ತಲೆಗೆ ಪೆಟ್ಟಾಗಿದ್ದು ಮೈಸೂರಿಗೆ ಹಾಗೂ ಮನೋಜ್‌ಭಟ್‌ರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಕುಶಾಲನಗರದಿಂದ ಸೋಮವಾರಪೇಟೆಗೆ ಬರುತ್ತಿದ್ದ ಬೈಕ್ ಹಾಗೂ ಸೋಮವಾರಪೇಟೆಯಿಂದ ಯಡವಾರೆಗೆ ಹೋಗುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.