ಗೋಣಿಕೊಪ್ಪಲು, ಮೇ ೧೧: ಕಳೆದ ಮೂರು ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಆದಿವಾಸಿಗಳ ಕುಟುಂಬಕ್ಕೆ ಇದೀಗ ರಾತ್ರಿ ವೇಳೆ ವನ್ಯಜೀವಿಗಳ ಭಯ ಕಾಡುತ್ತಿದೆ.

ಪ್ರತಿಭಟನೆ ನಡೆಸುತ್ತಿರುವ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಹಾಗೂ ಹುಲಿ ಇತರ ವನ್ಯಜೀವಿಗಳು ಹೆಚ್ಚಾಗಿ ವಾಸಮಾಡುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಹಜವಾಗಿಯೇ ಪ್ರತಿಭಟನಾಕಾರರಿಗೆ ಭಯ ಆವರಿಸತೊಡಗಿದೆ.

ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಮಂಗಳವಾರ ರಾತ್ರಿಯಿಂದ ಅರಣ್ಯ ಇಲಾಖೆಯ ವಿಶೇಷ ಪಡೆಯ ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಅರಣ್ಯ ಪ್ರದೇಶದಿಂದ ವನ್ಯಜೀವಿಗಳು ಪ್ರತಿಭಟನಾ ಸ್ಥಳಕ್ಕೆ ಲಗ್ಗೆ ಇಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಿದ್ದಾರೆ.

ವನ್ಯಜೀವಿಗಳಿಂದ ಯಾವುದೇ ಅಪಾಯ ಸಂಭವಿಸಿದರೂ ಅದರ ಹೊಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊರಬೇಕೆಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಕಷ್ಟವನ್ನು ಆಲಿಸಲು ರಾಜ್ಯದ ಕಂದಾಯ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕೆಂದು ಹಾಡಿನ ಮುಖಂಡ ಹಾಗೂ ಹೋರಾಟದ ಮುಖ್ಯಸ್ಥ ಜೇನು ಕುರುಬರ ಅಯ್ಯಪ್ಪ ಒತ್ತಾಯಿಸಿದ್ದಾರೆ.

ಆದಿವಾಸಿಗಳು ಪ್ರತಿಭಟನೆ ನಡೆಸುತ್ತಿರುವ ಅಡುಗುಂಡಿ ಸ್ಥಳಕ್ಕೆ ಚಿತ್ರ ನಟ ನಿನಾಸಂ ಮಂಜು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಪುನರ್ವಸತಿ ಕೇಂದ್ರವಾದ ಮಾಸ್ತಿಗುಡಿಯಲ್ಲಿ ಮೂರು ಟ್ರಾಕ್ಟರ್ ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯದಲ್ಲಿ ತೊಡಗಿತ್ತು.

ಪ್ರತಿಭಟನಾ ಸ್ಥಳಕ್ಕೆ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಆರ್.ಎಫ್.ಓ. ಕಿರಣ್ ಕುಮಾರ್ ನಡುರಾತ್ರಿ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಭೂಮಿ ಸಮತಟ್ಟು ಮಾಡುತ್ತಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಡುಗುಂಡಿಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆದಿವಾಸಿಗಳು ಪ್ಲಾಸ್ಟಿಕ್ ಹೊದಿಕೆಯ ಅಡಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಚಿತ್ರ ವರದಿ : ಹೆಚ್.ಕೆ. ಜಗದೀಶ್