ಕುಶಾಲನಗರ, ಮೇ ೧೧: ಪ್ರಕೃತಿ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಪರಿಸರವಾದಿ ಸಂದೀಪ್ ಮಂಜುನಾಥ್ ಕರೆ ನೀಡಿದ್ದಾರೆ.

ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಮಾದರಿಯ ಹವಾಮಾನ ಕಂಡುಬರುತ್ತಿದ್ದು, ಹಲವು ಕಾರಣಗಳಿಂದ ಬದಲಾವಣೆ ಉಂಟಾಗಿದೆ. ಕಾವೇರಿ ನದಿ ಬಹುತೇಕ ಕಲುಷಿತಗೊಳ್ಳುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಕಾಣುತ್ತಿದೆ ಎಂದರು. ತ್ಯಾಜ್ಯಗಳ ಸಂಗ್ರಹ ಪ್ರಮಾಣ ಏರಿಕೆಯಾಗುತ್ತಿದ್ದು ಈ ಮೂಲಕ ಪರಿಸರ ಸಂಪೂರ್ಣ ಕಲುಷಿತಗೊಳ್ಳಲು ಕಾರಣವಾಗುತ್ತಿದೆ ಎಂದರು.

ಆರ್ಯವೈಶ್ಯ ಸಮಾಜದ ಜಿಲ್ಲಾ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರಪ್ರಸಾದ್ ಮಾತನಾಡಿ, ಸಮಾಜ ಬಾಂಧವರು ಒಗ್ಗಟ್ಟಿನ ಮೂಲಕ ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬಹುದು ಎಂದರು.

ಕಾರ್ಯಕ್ರಮದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷ ಕಾಲ ಮೌನಾಚರಣೆ ನಡೆಸಲಾಯಿತು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಉದಯಕುಮಾರ್ ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ ಪ್ರವೀಣ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಕರ್ನಾಟಕ ಪರಿಷತ್ ಅಧ್ಯಕ್ಷ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮೃತ ರಾಜ್ಯ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರು ಇದ್ದರು.