(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೧೧ : ಭಾರತದ ಪ್ರಜೆ ತನ್ನ ಮೂಲಭೂತ ಹಕ್ಕನ್ನು ಪಡೆಯಲು ವಿವಿಧ ದಾಖಲಾತಿಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ನಾಗರಿಕನಿಗೂ ಮತದಾರರ ಚೀಟಿ, ಆಧಾರ್, ಪಡಿತರಚೀಟಿ, ಆದಾಯ ಹಾಗೂ ಜಾತಿ ದೃಢೀಕರಣ ಪತ್ರವನ್ನು ನಿಗದಿಪಡಿಸಿದೆ. ಕೊಡಗು ಜಿಲ್ಲೆಯಲ್ಲಿ ಪಂಜರಿ, ಪಣಿಯರವ, ಸಮುದಾಯವು ೩೫ ಸಾವಿರಕ್ಕೂ ಅಧಿಕ ಮಂದಿ ನೆಲೆ ಕಂಡುಕೊAಡಿದ್ದಾರೆ. ಜಿಲ್ಲೆಯ ಮೂಲ ನಿವಾಸಿಗಳಾಗಿ ಗುರುತಿಸಿಕೊಂಡಿರುವ ಇವರು ಬಹುತೇಕ ಕೂಲಿ ಕಾರ್ಮಿಕರಾಗಿಯೇ ವಿವಿಧ ತೋಟದ ಮನೆಗಳಲ್ಲಿ, ಹಾಡಿಗಳಲ್ಲಿ ಲೈನ್‌ಮನೆಗಳಲ್ಲಿ ವಾಸವಾಗಿದ್ದಾರೆ. ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ವಾರ್ಷಿಕವಾಗಿ ಕೋಟ್ಯಾಂತರ ಅನುದಾನವನ್ನು ಬಿಡುಗಡೆಗೊಳಿಸುತ್ತಿದೆ.
ಗಿರಿಜನರ ಕಲ್ಯಾಣಕ್ಕಾಗಿ ಇವರಿಗಾಗಿಯೇ ಇಲಾಖೆಯನ್ನು ಆರಂಭಿಸಿದ್ದಾರೆ. ಅಧಿಕಾರಿಗಳ ಮೂಲಕ ಗಿರಿಜನ ಸಮುದಾಯಗಳಿಗೆ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ನೀಡುವುದು ಇಲಾಖೆಯ ಮುಖ್ಯ ಗುರಿಯಾಗಿದೆ. ಆದರೆ ಲೈನ್ ಮನೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ವಾಸಿಸುತ್ತಿರುವ ಗಿರಿಜನರು ಇನ್ನೂ ಕೂಡ ಅಗತ್ಯ ದಾಖಲಾತಿಗಳನ್ನು ಹೊಂದಿಲ್ಲ. ಇದರಿಂದಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳು ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ನಿಟ್ಟಿನಲ್ಲಿ ಹಲವು ಸಭೆಗಳಲ್ಲಿ ಜಿಲ್ಲಾಡಳಿತದ ಮುಂದೆ ಹಲವು ಸಂಘಟನೆಗಳು ಗಿರಿಜನರಿಗೆ ದಾಖಲಾತಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಯನ್ನು ಮನವಿ ಮಾಡಿದ್ದರು. ಕೊಡಗಿನ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೋಬಳಿ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿದ ಸಂದರ್ಭ ಈ ಬಗ್ಗೆ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೊಡಗು ಡಿಸಿ ಡಾ.ಬಿ.ಸಿ.ಸತೀಶ ಅವರು ಗಿರಿಜನರಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಲು ಹಾಗೂ ಗಿರಿಜನರು ವಾಸಿಸುವ ಮನೆಗಳಿಗೆ ತೆರಳಲು ವಿವಿಧ ಇಲಾಖೆಯ ಅಧಿಕಾರಿಗಳನ್ನು ನೇಮಿಸಿ ಕಾರ್ಯೋನ್ಮುಖರಾಗಿದ್ದಾರೆ.
ಈ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳ ತಂಡ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಆ ಮೂಲಕ ಜಿಲ್ಲೆಯ ಪ್ರತಿ ಹಾಡಿಗಳಿಗೆ, ಗಿರಿಜನರು ವಾಸಿಸುತ್ತಿರುವ ಲೈನ್ ಮನೆಗಳಿಗೆ ತೆರಳಿ ಅವರಿಗೆ ಅವಶ್ಯವಿರುವ ದಾಖಲಾತಿಗಳನ್ನು ಸ್ಥಳದಲ್ಲಿಯೇ ನೀಡುವ ಸಲುವಾಗಿ ನಿಗದಿತ ನಮೂನೆಗಳಲ್ಲಿ
(ಮೊದಲ ಪುಟದಿಂದ) ಅರ್ಜಿಗಳನ್ನು ಪಡೆದು ದಾಖಲಾತಿಗಳನ್ನು ನೀಡುವ ಪ್ರಯತ್ನ ಶರವೇಗದಲ್ಲಿ ನಡೆಯುತ್ತಿವೆ. ದಾಖಲಾತಿ ಆಂದೋಲನ ಸಮಿತಿಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷರಾಗಿರುತ್ತಾರೆ. ಕಾರ್ಯದರ್ಶಿಗಳಾಗಿ ಗಿರಿಜನ ಕಲ್ಯಾಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಕಾರ್ಯಕ್ರಮದ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗುತ್ತಿದೆ.
ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೭೯ ಹಾಡಿಗಳಲ್ಲಿ ಗಿರಿಜನ ಸಮುದಾಯಗಳಾದ ಯರವ, ಜೇನುಕುರುಬ, ಬೆಟ್ಟಕುರುಬ, ಹೆಚ್ಚಾಗಿ ವಾಸಿಸುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಪಂಜರಿ ಹಾಗೂ ಪಣಿಯರವರ ಕುಟುಂಬಗಳು ದಾಖಲಾತಿಯಿಂದ ಹೆಚ್ಚಾಗಿ ವಂಚಿತರಾಗಿರುವುದು ಬೆಳಕಿಗೆ ಬಂದಿದೆ.
ಇದರಿAದಾಗಿ ಅರ್ಹ ಗಿರಿಜನರಿಗೆ ಸವಲತ್ತುಗಳು ತಲುಪುತ್ತಿಲ್ಲ. ಇದನ್ನು ಗಮನಿಸಿದ ಕೊಡಗಿನ ಡಿಸಿ ಬಿ.ಸಿ.ಸತೀಶರವರು ವಿಶೇಷ ಕಾಳಜಿ ವಹಿಸಿ ದಾಖಲೆ ನೀಡಲು ಯೋಜನೆ ರೂಪಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜೊತೆಗೂಡಿ ಗಿರಿಜನರಿಗೆ ದಾಖಲೆ ತಲುಪಿಸಲು ಕೆಲಸ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಪಂಚಾಯಿತಿಯ ದೈಯ್ಯದ ಹಡ್ಲು, ಚನ್ನಂಗಿ ಬಸವನಹಳ್ಳಿ, ದಿಡ್ಡಳ್ಳಿ, ಚೊಟ್ಟೆಪಾರೆ, ಹಾಗೂ ಚಿಕ್ಕರೇಷ್ಮೆ, ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಪಂಚಾಯಿತಿಯ ನಾಣಚ್ಚಿ, ವಿ.ಬಾಡಗ, ಬಾಳೆಕೋವು, ಚಂದನಕೆರೆ, ಕೊಡಂಗೆ, ಚೂರಿಕಾಡು ಹಾಗೂ ಆಲಂದೋಡು ದೇವರಪುರ ಪಂಚಾಯಿತಿಯ ದೇವರಕಾಡು ೧,೨, ಕಾರೆಹಡ್ಲು, ಬೊಮ್ಮನಹಳ್ಳಿ, ಕುಟ್ಟ ಪಂಚಾಯಿತಿಯ ಸಿಂಕೋನ, ನಾತಂಗಾಲ, ಅರುವತ್ತೋಕ್ಲು ಪಂಚಾಯಿತಿಯ ಅರುವತ್ತೋಕ್ಲು ದೇವಕಾಲೋನಿ, ಸೀತಾ ಕಾಲೋನಿ, ಕಾರೆಕಾಡು, ಮಾಯಮುಡಿ ಪಂಚಾಯಿತಿಯ ಮಾರಿಯಮ್ಮ ಕಾಲೋನಿ, ಅಂಬುಕೋಟೆ, ಬೆಳ್ಳಿ ಕಾಲೋನಿಯ ಗಿರಿಜನರನ್ನು ಭೇಟಿ ಮಾಡಲಾಗಿದ್ದು ೫೪೨ ಅರ್ಹರಿಗೆ ದಾಖಲೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ಪಂಚಾಯಿತಿ ವ್ಯಾಪ್ತಿಯ ಹಾಡಿಗಳಲ್ಲಿ ಹಾಗೂ ಲೈನ್ ಮನೆಗಳಲ್ಲಿ ವಾಸವಿರುವ ಗಿರಿಜನರನ್ನು ಗುರುತಿಸಿ ದಾಖಲಾತಿಗಳನ್ನು ನೀಡುವ ಸಲುವಾಗಿ ಅಧಿಕಾರಿಗಳ ತಂಡ ಕೆಲಸ ನಿರ್ವಹಿಸುತ್ತಿದೆ.
ಗಿರಿಜನರ ಬಳಿ ಯಾವುದೇ ದಾಖಲಾತಿ ಇಲ್ಲದ ಸಂದರ್ಭ ಅಂತಹವರನ್ನು ಗುರುತಿಸಿ ವೈದ್ಯಾಧಿಕಾರಿಗಳ ಮುಂದೆ ಹಾಜರು ಪಡಿಸಲಾಗುತ್ತದೆ. ಇವರಿಗೆ ವೈದ್ಯರು ವಯಸ್ಸಿನ ದೃಢೀಕರಣ ನೀಡುತ್ತಾರೆ. ಈ ಆಧಾರದ ಮೇಲೆ ಸಂಬAಧಿಸಿದ ಅಧಿಕಾರಿಗಳು ವಯಸ್ಸಿನ ದೃಢೀಕರಣ ಮಂಜೂರು ಮಾಡುತ್ತಾರೆ. ಇದರಿಂದ ಅರ್ಹ ಗಿರಿಜನರಿಗೆ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಪಡೆಯಲು ಅವಕಾಶವಾಗುತ್ತಿವೆ.
ತಾಲೂಕಿನಲ್ಲಿ ಶೇ.೩೦ ರಿಂದ ೪೦ ಮಂದಿ ಆಧಾರ್‌ನಿಂದ ವಂಚಿತರಾಗಿದ್ದಾರೆ. ಇಂತಹವರನ್ನು ಗುರುತಿಸಿ ದಾಖಲಾತಿಗಳನ್ನು ನೀಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳ ತಂಡಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಮ್ಮೆ ಆಧಾರ್ ಕಳೆದರೆ ಮತ್ತೆ ಮತ್ತೆ ಆಧಾರ್ ಮಾಡಿಸಿದರೂ ಕಂಪ್ಯೂಟರ್ ಇದನ್ನು ಮಾನ್ಯ ಮಾಡುತ್ತಿಲ್ಲ. ಇದರಿಂದಾಗಿ ಇಂತಹವರಿಗೆ ದಾಖಲೆ ಒದಗಿಸುವುದು ಕಷ್ಟವಾಗುತ್ತಿದೆ.