ಮಡಿಕೇರಿ, ಮೇ ೯ : ಹಲವು ವರ್ಷಗಳ ತಪಸ್ಸಿನ ಫಲದಿಂದ ಸಹಕಾರಿ ಭಾರತಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದರೆ ಜನರು ಗುರುತಿಸುತ್ತಾರೆ ಮತ್ತು ಯಶಸ್ಸು ಸಾಧಿಸಬಹುದು ಎಂದು ಸಹಕಾರಿ ಭಾರತಿ ಸಂರಕ್ಷಕರಾದ ರಮೇಶ್ ವೈದ್ಯ ಹೇಳಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಸಹಕಾರ ಭಾರತಿ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಹಕಾರ ಭಾರತಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಮತ್ತು ದೇಶವ್ಯಾಪಿ ತನ್ನ ಕಾರ್ಯಕ್ಷೇತ್ರ ಹೊಂದಿರುವ ಸಂಸ್ಥೆಯಾಗಿದೆ ಎಂದು ಅವರು ತಿಳಿಸಿದರು.

ಸಹಕಾರಿ ಕ್ಷೇತ್ರದ ವೃದ್ಧೀಕರಣ ಹಾಗೂ ಆಧುನೀಕರಣದ ದೃಷ್ಟಿಕೋನದಲ್ಲಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಅವಿರತವಾಗಿ ಸಹಕಾರ ಭಾರತಿ ಶ್ರಮಿಸುತ್ತಿದೆ ಎಂದರು.

ಪ್ರಾಮಾಣಿಕತೆಯಿAದ ದುಡಿದು ಶ್ರಮಿಸಿ ಸಹಕಾರ ಭಾರತಿಯನ್ನು ಬೆಳೆಸುವ ಕೆಲಸ ಆಗಬೇಕು. ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವುದೇ ನಿಜವಾದ ಮೋಕ್ಷ. ಕೃಷಿಕರು, ವಿದ್ಯಾವಂತರು ಮತ್ತು ಹಲವರು ಯುವಜನರು ಸಹಕಾರ ಭಾರತಿ ಕ್ಷೇತ್ರದಲ್ಲಿ ದುಡಿಯುವಂತಾಗಬೇಕು ಎಂದು ಅವರು ಹೇಳಿದರು.

ಸಹಕಾರಿ ಭಾರತಿಯ ರಾಜ್ಯ ಉಪಾಧ್ಯಕ್ಷ ರವಿಬಸಪ್ಪ ಮಾತನಾಡಿ ಸಹಕಾರಿ ಭಾರತಿ ಕ್ಷೇತ್ರದಲ್ಲಿ ಸಿಗುವ ಗೌರವ, ನೆಮ್ಮದಿ, ಉಳಿದ ಯಾವುದೇ ಕೇತ್ರದಲ್ಲಿ ಸಿಗುವುದಿಲ್ಲ. ಸಹಕಾರ ರಂಗದಲ್ಲಿ ಹಣಕ್ಕಿಂತ, ವ್ಯಕ್ತಿಗೆ ಗೌರವ ಸಿಗುತ್ತದೆ.

ಜಿಲ್ಲೆಯ ಜನರು ಒಟ್ಟಾಗಿ ಕೈ ಜೋಡಿಸಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳನ್ನು ಬೆಳೆಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಅವರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಯು ತನ್ನದೇ ಆದ ಕೊಡುಗೆ ನೀಡಿದೆ. ಸ್ವಾತಂತ್ರ‍್ಯ ನಂತರದಲ್ಲಿ ಕೃಷಿಪತ್ತಿನ ಸಹಕಾರ ಸಂಘಗಳ ಉದಯದಿಂದ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಪರಿಶ್ರಮದಿಂದ ದುಡಿದ ಕಾರಣ ಸಹಕಾರ ಸಂಘಗಳು ಬೆಳೆದಿದೆ ಎಂದು ಅವರು ಹೇಳಿದರು.

ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ ಮಾತನಾಡಿ ಜಿಲ್ಲೆಯಲ್ಲಿ ಸಹಕಾರ ಭಾರತಿಯನ್ನು ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕು. ಎಲ್ಲರೂ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ದುಡಿಯುವಂತಾಗಬೇಕು ಎಂದು ಹೇಳಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಯಿಂದ ದುಡಿಯಲು ಅವಕಾಶಗಳಿವೆ ಎಂದರು. ಜಿಲ್ಲೆಯ ಹಲವಾರು ಬೆಳೆಗಾರರ ಸಂಘಗಳು ನಷ್ಟದಲ್ಲಿವೆ. ಕಾಫಿ ಬೆಳೆಗಾರರ ಸಂಘವು ಕೂಡ ನಷ್ಟದಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಂ.ಬಿ.ದೇವಯ್ಯ ಅವರನ್ನು ಗೌರವಿಸಲಾಯಿತು. ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ಉಮೇಶ್ ಉತ್ತಪ್ಪ ಅವರು ಸಹಕಾರ ಭಾರತಿಯ ವಾರ್ಷಿಕ ವರದಿ ಮಂಡಿಸಿದರು.

ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿಯಾದ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಮತ್ತು ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್, ಸಹಕಾರ ಭಾರತಿ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀನಾ ಬೊಳ್ಳಮ್ಮ ಇತರರು ಇದ್ದರು.

ಉಮೇಶ್ ಉತ್ತಪ್ಪ ಸ್ವಾಗತಿಸಿದರು, ಬೀನಾ ಬೊಳ್ಳಮ್ಮ ಪ್ರಾರ್ಥಿಸಿದರು, ಯೋಗೇಂದ್ರ ನಾಯಕ್ ನಿರೂಪಿಸಿದರು, ಕಾಳನ ರವಿ ವಂದಿಸಿದರು.