ನಾಪೋಕ್ಲು, ಮೇ ೯: ಯಾವುದೇ ಸಂಘದ ಬೆಳವಣಿಗೆ ಕ್ರೀಡೆಯಿಂದ ಮಾತ್ರ ಸಾಧ್ಯವಿಲ್ಲ. ಆದರೆ ಒಂದು ಸಮುದಾಯ ಒಗ್ಗಟ್ಟಾಗಿರಬೇಕಾದರೆ ಕ್ರೀಡೆ ಸುಲಭದ ದಾರಿ. ಕ್ರೀಡಾಕೂಟಗಳಲ್ಲಿ ತಂಡ ಸ್ಪೂರ್ತಿಯಿಂದ ಗೆಲುವು ಸಾಧ್ಯ ಎಂದು ಸಮಾಜ ಸೇವಕ ಡಾ. ಮಂಥರ್‌ಗೌಡ ಹೇಳಿದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಹಾಗೂ ಸಂತ ಮೇರಿಮಾತೆ ದೇವಾಲಯ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲರೂ ಸಚಿನ್ ತೆಂಡೂಲ್ಕರ್ ಆಗಲು ಸಾಧ್ಯವಿಲ್ಲ. ಆದರೆ ಕ್ರೀಡಾ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಾಮಾನ್ಯರು ಮುಂದೆ ಬರಲು ಸಾಧ್ಯ. ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಹಮ್ಮಿಕೊಂಡಿರುವ ಕ್ರೀಡಾಕೂಟದ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಮುಂದಕ್ಕೆ ಬರಲು ಶ್ರಮಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ. ಡಿಸಿಲ್ವ ವಹಿಸಿದ್ದು ಕ್ರಿಕೆಟ್ ಪಂದ್ಯವನ್ನು ನಾಪೋಕ್ಲುವಿನ ಧರ್ಮಗುರು ಜ್ಞಾನಪ್ರಕಾಶ್ ಉದ್ಘಾಟಿಸಿದರು.

ಈ ಸಂದರ್ಭ ಸ್ಥಾನೀಯ ಅಧ್ಯಕ್ಷ ಲಾರೆನ್ಸ್, ಉಪಾಧ್ಯಕ್ಷ ಜಾನ್, ಚೊಕಿವಾಸ್ ಸದಸ್ಯರಾದ ಜೋಯಿ, ಜೋಸೆಫ್, ಎನ್.ಟಿ. ಜೋಸೆಫ್, ಫಿಲಿಪ್‌ವಾಸ್, ದಿವ್ಯಜ್ಯೋತಿ, ಸುನಿಲ್‌ಮೊರಾಸ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಕ್ರೀಡಾಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಿತ್ರಕುಮಾರಿ ಹಾಗೂ ಪದವಿಯಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದ ಆಶಿಕ್‌ಪ್ರೊಟೆಸ್ಟ್ ಅವರನ್ನು ಸನ್ಮಾನಿಸಲಾಯಿತು. ಡೆರಿನ ಮತ್ತು ಪೌಲಿನ ಪ್ರಾರ್ಥಿಸಿದರು. ಕಾರ್ಯದರ್ಶಿ ಸಬಾಸ್ಟಿನ್ ಸ್ವಾಗತಿಸಿದರು. ಅಂಥೋಣಿ ಡಿಸೋಜ ನಿರೂಪಿಸಿ, ಫಿಲಿಪಸ್ ವಂದಿಸಿದರು.

ಸಿದ್ದಾಪುರ ತಂಡಕ್ಕೆ ಗೆಲುವು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರದ ಸಂತ ಮೇರಿ ಮಾತೆ ದೇವಾಲಯ ತಂಡ ಗೆಲುವು ಸಾಧಿಸಿತು. ಪೊನ್ನಂಪೇಟೆಯ ಸಂತ ಅಂಥೋಣಿ ದೇವಾಲಯ ತಂಡ ದ್ವಿತೀಯ ಸ್ಥಾನ ಗಳಿಸಿತು. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ೨೩ ದೇವಾಲಯಗಳ ತಂಡಗಳು ಭಾಗವಹಿಸಿದ್ದವು.

ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು ೬ ತಂಡಗಳು ಪಾಲ್ಗೊಂಡಿದ್ದು, ನಾಪೋಕ್ಲುವಿನ ಸಂತ ಮೇರಿಮಾತೆ ದೇವಾಲಯ ತಂಡ ಪ್ರಥಮ ಸ್ಥಾನ ಗಳಿಸಿತು. ಸಿದ್ದಾಪುರದ ಸಂತ ಜೋಸೆಫರ ದೇವಾಲಯದ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ೧೧ ತಂಡಗಳು ಪಾಲ್ಗೊಂಡಿದ್ದು ಪಾಲಿಬೆಟ್ಟದ ಲೂಡ್ಸ್ ಮಾತೆ ದೇವಾಲಯ ತಂಡ ಪ್ರಥಮ ಸ್ಥಾನ ಗಳಿಸಿದರೆ ಸಿದ್ದಾಪುರದ ಸಂತ ಜೋಸೆಫರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಥ್ರೋಬಾಲ್ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಪಾಲ್ಗೊಂಡಿದ್ದು ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ದೇವಾಲಯದ ತಂಡ ಪ್ರಥಮ ಸ್ಥಾನ ಗಳಿಸಿತು. ಪಾಲಿಬೆಟ್ಟದ ಲೂಡ್ಸ್ ದೇವಾಲಯ ತಂಡ ದ್ವಿತೀಯ ಸ್ಥಾನ ಗಳಿಸಿತು.

ನಾಪೋಕ್ಲುವಿನ ಮೇರಿ ಮಾತೆ ದೇವಾಲಯದ ಧರ್ಮಗುರು ಜ್ಞಾನಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಬಿಎಎಲ್‌ಎಲ್‌ಬಿ ಪದವಿಯಲ್ಲಿ ನಾಲ್ಕನೇ ಸ್ಥಾನಗಳಿಸಿದ ಹೆಚ್.ಎಸ್. ಕುಮಾರ್ ಮತ್ತು ವಿಲ್ಮ ಡಿಸೋಜ ಪುತ್ರಿ ಜೋಸ್ವಿನರಿನಿತ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಉಪಾಧ್ಯಕ್ಷ ಜಾನ್‌ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಪಿ.ಎಫ್. ಸಬಾಸ್ಟಿನ್, ಖಜಾಂಚಿ ಐ.ಡಿ. ರಾಯ್, ಸಂಘಟನಾ ಕಾರ್ಯದರ್ಶಿ ಮರ‍್ವಿನ್ ಲೋಬೋ, ಗೌರವಾಧ್ಯಕ್ಷ ವಿ.ಎ. ಲಾರೆನ್ಸ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಅಂಥೋಣಿ ಡಿಸೋಜ, ಜಿಲ್ಲಾ ಸಂಚಾಲಕ ಜೋಕಿನ್, ಜಿಲ್ಲಾ ಸಂಪರ್ಕಾಧಿಕಾರಿ ಫಿಲಿಪ್‌ವಾಸ್, ಕೆ.ಟಿ. ಜೋಯಿï, ಡೈಸನ್, ಜೋಶಿ, ರೊನಿ ಮತ್ತಿತರರು ಇದ್ದರು.

ಡೆರಿನ ಮತ್ತು ಪೌಲಿನ ಪ್ರಾರ್ಥಿಸಿದರು. ಬಿಂದು ಸ್ಟೀಫನ್ ಸ್ವಾಗತಿಸಿ, ಅಂತೋಣಿ ನಿರೂಪಿಸಿದರು. ಜಾರ್ಜ್ ಮಸ್ಕರೇನಸ್ ವಂದಿಸಿದರು.