ಸೋಮವಾರಪೇಟೆ, ಮೇ ೯: ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಯುವ ಆಟಗಾರ ಆಭರಣ್ ಸುದೇವ್ ಆಯ್ಕೆಯಾಗುವ ಮೂಲಕ ದೇಶದ ಹಾಕಿ ಕ್ಷೇತ್ರಕ್ಕೆ ಸೋಮವಾರಪೇಟೆಯಿಂದ ಮತ್ತೊಂದು ಕೊಡುಗೆ ನೀಡಿದಂತಾಗಿದೆ.
ಇದರೊAದಿಗೆ ಕಳೆದ ಎರಡು ವರ್ಷಗಳಿಂದ ಹೊರಗುಳಿದಿದ್ದ ಪ್ರತಿಭಾನ್ವಿತ ಆಟಗಾರ ಎಸ್.ವಿ. ಸುನಿಲ್ ಸಹ ತಂಡಕ್ಕೆ ಮರಳಿದ್ದು, ಜಿಲ್ಲೆಯ ಹಾಕಿ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
ದೆಹಲಿಯಲ್ಲಿ ಇಂದು ೨೦ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಹಾಕಿ ಇಂಡಿಯಾ ಸಂಸ್ಥೆ, ಭಾರತ ಹಾಕಿ ತಂಡದ ೨೦ ಸದಸ್ಯರ ಪಟ್ಟಿಯಲ್ಲಿ ಇದೇ ಪ್ರಥಮ ಬಾರಿಗೆ ಆಭರಣ್ ಸುದೇವ್ ಸ್ಥಾನ ಪಡೆದಿದ್ದರೆ, ಭಾರತ ತಂಡವನ್ನು ಪ್ರತಿನಿಧಿಸಿದ್ದ ಎಸ್.ವಿ. ಸುನಿಲ್ ಸಹ ಸ್ಥಾನ ಪಡೆದಿದ್ದಾರೆ.
ಇದೇ ತಾ.೨೩ರಿಂದ ಜೂನ್ ೧ರವರೆಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಹೀರೋ ಮೆನ್ಸ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಈ ಈರ್ವರು ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಆಭರಣ್ ಸುದೇವ್ ಮೂಲತಃ ಸೋಮವಾರಪೇಟೆಯ ಎಂ.ಜಿ. ರಸ್ತೆ ನಿವಾಸಿ ಸುದೇವ್ ಮತ್ತು ರಾಣಿ ದಂಪತಿಯ ಪುತ್ರನಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ತೆರಳಿದ್ದರು. ಸದ್ಯ ಬೆಂಗಳೂರಿನಲ್ಲಿ ತರಬೇತಿ ಪಡೆದು ಇದೀಗ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
(ಮೊದಲ ಪುಟದಿಂದ) ಸಣ್ಣಂದಿನಿAದಲೇ ಹಾಕಿ ಕ್ರೀಡೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಆಭರಣ್, ಇಲ್ಲಿನ ಓ.ಎಲ್.ವಿ. ಕಾನ್ವೆಂಟ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು, ನಂತರ ಬೆಂಗಳೂರಿನ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಸಾಯಿ ಹಾಗೂ ಸಿಓಇ ಕ್ರೀಡಾಶಾಲೆ ಯಲ್ಲಿ ವಿದ್ಯಾಭ್ಯಾಸದೊಂದಿಗೆ ಹಾಕಿ ತರಬೇತಿ ಪಡೆದು ಪ್ರತಿಭಾನ್ವಿತ ಆಟಗಾರನಾಗಿ ಹೊರಹೊಮ್ಮಿದನು. ೨೦೧೮ರಲ್ಲಿ ನೆದರ್ ಲ್ಯಾಂಡ್ ನಲ್ಲಿ ನಡೆದ ಜೂನಿಯರ್ ಚಾಂಪಿಯನ್ ಟ್ರೋಫಿಯಲ್ಲಿ ಭಾಗವಹಿಸಿ ೪ ಗೋಲು ಗಳಿಸುವ ಮೂಲಕ ಗಮನ ಸೆಳೆದ ಆಭರಣ್, ಕ್ರೀಡಾ ಕ್ಷೇತ್ರದಲ್ಲಿ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡನು. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಮೂರನೇ ಸ್ಥಾನ ಪಡೆಯಿತು. ಆಲ್ ಇಂಡಿಯಾ ಯೂನಿವರ್ಸಿಟಿ ಮಟ್ಟದ ಟೂರ್ನಮೆಂಟ್ ನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಆಭರಣ್, ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನನಾದನು. ಪ್ರಸ್ತುತ ಕೇಂದ್ರ ಸರ್ಕಾರದ ಏ.ಜಿ.ಓ.ಆರ್.ಸಿ. ಯಲ್ಲಿ ಉದ್ಯೋಗಿಯಾಗಿರುವ ಆಭರಣ್ ನ ತಂದೆ ಸುದೇವ್ ಅವರೂ ಸಹ ಹಾಕಿ ಆಟಗಾರರಾಗಿದ್ದು, ಸೋಮವಾರಪೇಟೆ ಬ್ಲೂ ಸ್ಟಾರ್ ನ ಅನುಭವಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.
ಕೊಡಗಿನಿAದ ಎಸ್.ವಿ.ಸುನಿಲ್ ಹಾಗೂ ಆಭರಣ್ ಭಾರತ ತಂಡದಲ್ಲಿದ್ದಾರೆ. ಇದರೊಂದಿಗೆ ನೆರೆಯ ಹಾಸನಜಿಲ್ಲೆಯ ಶೇಷೇಗೌಡ ಅವರೂ ಸಹ ಸ್ಥಾನಪಡೆದಿದ್ದು, ಈ ಮೂಲಕ ಕರ್ನಾಟಕದಿಂದ ಮೂವರು ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ.
- ವಿಜಯ್ ಹಾನಗಲ್