ಗೋಣಿಕೊಪ್ಪ ವರದಿ, ಮೇ ೮: ಹಾತೂರು ಸರ್ಕಾರಿ ಪ್ರೌಢಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆದ ಮೊದಲನೇ ವರ್ಷದ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿ ಕಪ್ ಅನ್ನು ಮಕ್ಕಂದೂರು ಟೈಟಾನ್ಸ್ ಗೆದ್ದುಕೊಂಡಿದ್ದು, ಚೊಚ್ಚಲ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಫೈನಲ್‌ನಲ್ಲಿ ಸೋಲನುಭವಿಸಿದ ಪೂಜಾರಿ ಹಿಟ್ಟರ್ಸ್ ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಂಡಿತು.
ಅಂತಿಮ ಪಂದ್ಯದಲ್ಲಿ ಮಕ್ಕಂದೂರು ಟೈಟಾನ್ಸ್ ತಂಡವು ಪೂಜಾರಿ ಹಿಟ್ಟರ್ಸ್ ತಂಡವನ್ನು ೪ ರನ್‌ಗಳಿಂದ ಸೋಲಿಸಿ ಕಪ್ ಗೆದ್ದು ಕೊಂಡಿತು. ಮಕ್ಕಂದೂರು ಮೊದಲು ಬ್ಯಾಟ್ ಮಾಡಿ ೭ ವಿಕೆಟ್ ನಷ್ಟಕ್ಕೆ ೪೦ ರನ್ ಗುರಿ ನೀಡಿತು. ಹಿಟ್ಟರ್ಸ್ ೪ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಲಾಗದೆ ೩೫ ರನ್‌ಗೆ ಸೋಲೊಪ್ಪಿಕೊಂಡಿತು.
ಕ್ಯಾಲಿಫೈಯರ್ ಒಂದರಲ್ಲಿ ಮಕ್ಕಂದೂರು ಟೈಟಾನ್ಸ್ ೧೧ ರನ್‌ಗಳಿಂದ ಗ್ರೀನ್ ಕೂರ್ಗ್ ತಂಡವನ್ನು ಮಣಿಸಿತು. ಮಕ್ಕಂದೂರು ೫ ವಿಕೆಟ್ ನಷ್ಟಕ್ಕೆ ೫೮ ರನ್, ಗ್ರೀನ್ ೬ ವಿಕೆಟ್ ಕಳೆದುಕೊಂಡು ೪೭ ರನ್ ಮಾತ್ರ ಕಲೆ ಹಾಕಿತು.
ಕ್ವಾಲಿಫೈಯರ್ ೨ನೇ ಪಂದ್ಯದಲ್ಲಿ ಪೂಜಾರಿ ಹಿಟ್ಟರ್ಸ್ ತಂಡವು ಮಡಿಕೇರಿ ರಾಯಲ್ ಪೂಜಾರಿ ತಂಡವನ್ನು ೧೮ ರನ್‌ಗಳಿಂದ ಸೋಲಿಸಿತು. ಹಿಟ್ಟರ್ಸ್ ೫ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿತು. ರಾಯಲ್ ಪೂಜಾರಿ ೫ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿತು.
ಎಲಿಮಿನೇಟರ್ ಪಂದ್ಯದಲ್ಲಿ ಪೂಜಾರಿ ಹಿಟ್ಟರ್ಸ್ ಗ್ರೀನ್ ಕೂರ್ಗ್ ವಿರುದ್ದ ೨ ರನ್‌ಗಳ ರೋಚಕ ಗೆಲುವು ಪಡೆಯಿತು. ಪೂಜಾರಿ ಹಿಟ್ಟರ್ಸ್ ೧ ವಿಕೆಟ್‌ಗೆ ೪೨ ರನ್, ಗ್ರೀನ್ ತಂಡ ೩ ವಿಕೆಟ್ ಕಳೆದುಕೊಂಡು ೪೦ ರನ್ ಗಳಿಸಿತು.
ಪೂಜಾರಿ ಹಿಟ್ಟರ್ಸ್ ಚಂದನ್ ಬ್ರದರ್ಸ್ ತಂಡವನ್ನು ೮ ವಿಕೆಟ್‌ಗಳಿಂದ ಮಣಿಸಿತು. ಚಂದನ್ ಬ್ರದರ್ಸ್ ೭ ವಿಕೆಟ್ ಕಳೆದುಕೊಂಡು ೧೮ ರನ್ ಗುರಿ ನೀಡಿತು. ಹಿಟ್ಟರ್ಸ್ ೧.೫ ಒವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಹಿಟ್ಟರ್ಸ್ ಆಟಗಾರ ಪವನ್, ಗಣೇಶ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಬಿಲ್ಲವ ಪ್ಯಾಂಥರ್ಸ್ ಬಿಲ್ಲವ ಟೈಗರ್ ತಂಡವನ್ನು ೭ ರನ್‌ಗಳಿಂದ ಮಣಿಸಿತು. ಪ್ಯಾಂಥರ್ಸ್ ೫ ವಿಕೆಟ್ ಕಳೆದುಕೊಂಡು ೫೭ ರನ್ ಗುರಿ ನೀಡಿತು. ಬಿಲ್ಲವ ಟೈಗರ್ ೧ ವಿಕೆಟ್ ಕಳೆದುಕೊಂಡು ೪೯ ರನ್ ಮಾತ್ರ ಗಳಿಸಿತು.