*ಗೋಣಿಕೊಪ್ಪ, ಮೇ ೮: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡಾವಳಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಲು ಅನುಮತಿ ನೀಡಬಾರದೆಂದು ನಿರ್ಣಯಿಸಿದರೂ, ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ೬ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಹಾಗೂ ೯ ಮತ್ತು ೧೧ ಎ ನಮೂನೆ ವಿತರಿಸಲು ಮುಂದಾಗಿರುವುದನ್ನು ಖಂಡಿಸಿ ಪಂಚಾಯಿತಿ ಸದಸ್ಯರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಹಾತೂರು ಗ್ರಾಮ ಪಂಚಾಯಿತಿ ಸದಸ್ಯರುಗಳು ಘೋಷಿಸಿದ್ದಾರೆ.
ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾತೂರು ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಚಿಣ್ಣಪ್ಪ, ಪೊನ್ನಮ್ಮ, ಎ.ಎಂ. ಸುಮಿತಾ, ಸುಮಾ ಅಶೋಕ್, ಅಕ್ಕಮ್ಮ ಉತ್ತಪ್ಪ ಈ ವಿಚಾರವನ್ನು ಬಹಿರಂಗಪಡಿಸಿ ಮಾತನಾಡಿದರು.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡ್ ವ್ಯಾಪ್ತಿಯ ಕಾಪ್ಸ್ ಶಾಲೆಯ ಸಮೀಪ ಎಂ.ಯು. ನಂಜಪ್ಪ ಅವರ ಆಧಾರ್ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣದಲ್ಲಿ ಪಂಚಾಯಿತಿ ನಿಯಂತ್ರಣ ಮಾದರಿ ಉಪವಿಧಿ ೨೦೧೫ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂದು ನಿರ್ಧರಿಸಲಾಗಿದೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೇಲಾಧಿಕಾರಿಗಳು ಒತ್ತಡ ಹೇರುತ್ತಿರುವುದರಿಂದ ೬ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಮುಂದಾಗಿದ್ದಾರೆ. ಅಲ್ಲದೇ ೯ ಮತ್ತು ೧೧ ಎ ನಮೂನೆಯನ್ನು ನೀಡಲು ನಿರ್ಧರಿಸಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮತ್ತು ಕಟ್ಟಡ ನಿರ್ಮಾಣವಾದರೆ ಅನಾಹುತಗಳಿಗೆ ದಾರಿಯಾಗುತ್ತದೆ ಎಂದು ಪಂಚಾಯಿತಿ ಸದಸ್ಯರುಗಳು ಆತಂಕ ವ್ಯಕ್ತಪಡಿಸಿದರು.
ಪಂಚಾಯಿತಿ ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದರೂ ಅವರ ಅನುಮತಿಯನ್ನು ಮತ್ತು ಅಭಿಪ್ರಾಯವನ್ನು ನಿರ್ಲಕ್ಷಿಸಿ ಅಪಾರ್ಟ್ಮೆಂಟ್‌ಗೆ ಅನುಮತಿ ನೀಡುತ್ತಿರುವುದು ಚುನಾಯಿತ ಸದಸ್ಯರುಗಳನ್ನು ಕಡೆಗಣಿಸಿದಂತೆ. ಈ ಕಾರಣ ಪಂಚಾಯಿತಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.