ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ

ಬೆಂಗಳೂರು, ಮೇ ೮: ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗಲಿದೆ. ಕರ್ನಾಟಕ ಸೇರಿದಂತೆ ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಮತ್ತು ಕೇರಳ ಮತ್ತು ತಮಿಳುನಾಡಿನ ಹಲವಾರು ಭಾಗಗಳಿಗೆ ಹೇರಳವಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ.

೧೦೦ ಕೃಷಿ ಸಂಜೀವಿನಿ ವಾಹನಗಳಿಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು, ಮೇ ೮: ಜಿಕೆವಿಕೆಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿಯ ೧೦೦ ವಾಹನಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತಿರರು ಈ ಸಂದರ್ಭ ಉಪಸ್ಥಿತರಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಾಯೋಗಿಕವಾಗಿ ೪೦ ಕೃಷಿ ಸಂಜೀವಿನಿ ವಾಹನಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ರೈತರಿಗೆ ಮತ್ತಷ್ಟು ಸಹಕಾರಿಯಾಗಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ೧೦೦ ವಾಹನಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ರೈತರು ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆ ೧೫೫೩೧೩ ಕರೆ ಮಾಡಿದರೆ, ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುತ್ತದೆ.

ಬೊಮ್ಮಾಯಿ ದುಡ್ಡು ಕೊಟ್ಟು ಸಿಎಂ ಆಗಿದ್ದಾರೆ : ಸಿದ್ದರಾಮಯ್ಯ

ಬೆಳಗಾವಿ, ಮೇ ೮: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೨೩ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ೧೦ ಕೆ.ಜಿ. ಅಕ್ಕಿ ಕೊಡುವುದಾಗಿ ಜನರಿಗೆ ಭರವಸೆ ನೀಡಿದರು. ಬಸವರಾಜ ಬೊಮ್ಮಾಯಿಯವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ, ನೇಮಕಗೊಂಡ ಮುಖ್ಯಮಂತ್ರಿ, ಅಲ್ಲಿ ದುಡ್ಡು ಕೊಟ್ಟು ಬಿಟ್ಟು ಬಂದು ಇಲ್ಲಿ ಮುಖ್ಯಮಂತ್ರಿ ಆಗಿದ್ದಾರೆ, ಹೀಗಾಗಿ ರಾಜ್ಯದ ಜನತೆಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತಿಲ್ಲ ಎಂದರು. ಆರ್‌ಎಸ್‌ಎಸ್ ಅವರು ಮುಖ್ಯಮಂತ್ರಿ ಮಾಡಿದ್ದಾರೆ, ಬೊಮ್ಮಾಯಿಯವರು ಅವರನ್ನು ಕೇಳಿಕೊಂಡು ಕೂತಿದ್ದಾರೆ. ಕಳೆದ ೪ ವರ್ಷದ ಬಿಜೆಪಿ ಆಡಳಿತ ಬಡವರಿಗೆ ಒಂದು ಮನೆ ಕೊಟ್ಟಿಲ್ಲ, ನಾನು ೫ ವರ್ಷ ಮುಖ್ಯಮಂತ್ರಿಯಾಗಿ ೧೫ ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ ಎಂದರು. ೨೦೨೩ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಕೊಡಿ, ನೇಕಾರರು, ಹೊಸ ಮನೆಗಳು, ಹೊಸ ಊರುಗಳನ್ನು ಕಟ್ಟಿಸಿಕೊಡೋಣ, ಗ್ರಾಮವನ್ನು ಪ್ರವಾಹಕ್ಕೆ ತುತ್ತಾಗದಂತೆ ಮಾಡಿಕೊಡುತ್ತೇವೆ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತನ್ನಿ, ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಕಾಂಗ್ರೆಸ್‌ಗೆ ಅವಕಾಶ ಕೊಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರ ಪರವಾದ ಸರ್ಕಾರವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಶಾಲೆಯ ಮೇಲೆ ವಾಯುದಾಳಿ: ೬೦ ಮಂದಿ ಸಾವು

ಕೈವ್, ಮೇ ೮: ಪೂರ್ವ ಉಕ್ರೇನ್‌ನ ಹಳ್ಳಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿರುವ ಸುಮಾರು ೬೦ ಜನರು ವಾಯುದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಲುಗಾನ್ಕ್÷್ಸ ಪ್ರಾದೇಶಿಕ ಗವರ್ನರ್ ಭಾನುವಾರ ಹೇಳಿದ್ದಾರೆ. "ಬಿಲೋಗೊರಿವ್ಕಾ ಗ್ರಾಮದ ಮೇಲೆ ವೈಮಾನಿಕ ದಾಳಿಯಲ್ಲಿ ನಡೆದಿದೆ ಎಂದು ಗವರ್ನರ್ ಸೆರ್ಗಿ ಗೈಡೈ ಹೇಳಿದ್ದಾರೆ. ಬಾಂಬ್‌ಗಳು ಶಾಲೆಯ ಮೇಲೆ ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದು ಶಾಲೆಯೊಳಗಿದ್ದ ೯೦ ಮಂದಿಯಲ್ಲಿ ೬೦ ಮಂದಿ ಮೃತಪಟ್ಟಿದ್ದು, ೨೭ ಮಂದಿಯನ್ನು ಉಳಿಸಲಾಗಿದೆ ಎಂದು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ. ಹೊಸ ವಾಯು ದಾಳಿಯ ಭೀತಿಯಿಂದಾಗಿ ರಾತ್ರಿ ವೇಳೆ ಜನರನ್ನು ಕಾಪಾಡುವ ಕೆಲಸವನ್ನು ತ್ವರಿತವಾಗಿ ಮಾಡಲು ಸಾಧ್ಯವಾಗಿಲ್ಲ, ನಂತರ ಇಂದು ಭಾನುವಾರ ಕೆಲಸ ಪುನರಾರಂಭಿಸಿದರು. ೧೧ ಜನರು ಆಶ್ರಯ ಪಡೆದಿದ್ದ ನೆಲಮಾಳಿಗೆ ಮನೆಯ ಮೇಲೆ ವಾಯುದಾಳಿ ನಂತರ ನೆರೆಯ ಶೆಪಿಲಿವ್ಕಾ ಗ್ರಾಮದಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.