ವೀರಾಜಪೇಟೆ, ಮೇ ೮: ವಿದ್ಯುತ್ ತಂತಿ ಸ್ಪರ್ಶಗೊಂಡು ಆಟೋ ಚಾಲಕ ದುರ್ಮರಣಗೊಂಡ ಘಟನೆ ಪಟ್ಟಣದ ಗಾಂಧಿ ನಗರದಲ್ಲಿ ನಡೆದಿದೆ.

ವೀರಾಜಪೇಟೆ ನಗರದ ಶಿವಕೇರಿ ನಿವಾಸಿ, ಪ್ರಸ್ತುತ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕ ಎನ್.ಕೆ. ದಿವಾಕರ್ (೫೮) ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ವ್ಯಕ್ತಿ.

ತಾ. ೮ರ ಮುಂಜಾನೆ ಸುಮಾರು ೪.೩೦ರ ವೇಳೆಯಲ್ಲಿ ದಿವಾಕರ್ ಮನೆಯ ಸನಿಹ ಭಾರೀ ಸದ್ದು ಕೇಳಿಸಿದೆ. ನಿದ್ದೆಯಿಂದ ಎದ್ದು ಹೊರ ಬಂದಿದ್ದಾರೆ. ಈ ಸಂದರ್ಭ ವಿದ್ಯುತ್ ಪ್ರವಾಹಕದಿಂದ ಹೊಗೆ ಹೋಗುತ್ತಿರುವುದು ಕಂಡಿದೆ. ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಕತ್ತಲು ಆವರಿಸಿತ್ತು. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಆಟೋ ಮೇಲೆ ತೆಂಗಿನ ಮರದ ಗರಿಯೊಂದು ಬಿದ್ದಿತ್ತು. ಇದನ್ನು ಗಮನಿಸಿದ ದಿವಾಕರ್ ಗರಿಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ಮಧ್ಯೆ ವಿದ್ಯುತ್ ಪೂರೈಕೆ ಮಾಡುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತ್ತು. ದಿವಾಕರ್ ತುಂಡಾಗಿದ್ದ ತಂತಿ ನೆಲದಲ್ಲಿರುವುದು ಗಮನಿಸಿರಲಿಲ್ಲ. ತೆಂಗಿನ ಗರಿ ತೆರವು ಮಾಡುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ. ಪರಿಣಾಮ ಬಲಗೈಯು ತುಂಡಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂದರ್ಭ ಬೆಂಕಿ ನಂದಿಸಲು ಅಲ್ಲೇ ಇದ್ದ ಮೃತ ಪತ್ನಿ ಪ್ರಯತ್ನ ಮಾಡಿದರೂ ಫಲಕಾರಿಯಾಗದೆ ಪತ್ನಿಯ ಮುಂದೆ ಪತಿ ಸಜೀವ ದಹನವಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ಮೃತರ ಪತ್ನಿ ಶೋಭ ಅವರು ನೀಡಿದ ದೂರಿನ ಮೇರೆಗೆ ವಿದ್ಯುತ್ ಅವಘಡದಿಂದ ಆಕಸ್ಮಿಕ ಮರಣ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಲಾಗಿದೆ.

(ಮೊದಲ ಪುಟದಿಂದ) ಮೃತರು ಪತ್ನಿ, ಈರ್ವರು ಮಕ್ಕಳನ್ನು ಅಗಲಿದ್ದಾರೆ. ಮೃತ ಶರೀರವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿ ನಂತರದಲ್ಲಿ ಸಂಬAಧಿಕರಿಗೆ ಮೃತ ಶರೀರವನ್ನು ಹಸ್ತಾಂತರ ಮಾಡಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಘಟನೆ ತಿಳಿಯುತ್ತಿದ್ದಂತೆ ಚೆಸ್ಕಾಂನ ವೀರಾಜಪೇಟೆ ವಿಭಾಗೀಯ ಸಹಾಯಕ ಅಭಿಯಂತರ ಸುರೇಶ್ ಅವರು ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಹಾಗೂ ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಹಾಗೂ ವೀರಾಜಪೇಟೆ ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ್ ಶೆಟ್ಟಿ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ