ಶನಿವಾರಸಂತೆ, ಮೇ ೮: ಹೊಳೆಯಲ್ಲಿ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಮೀಪದ ಹೆಮ್ಮನೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೈಲುಕೊಪ್ಪದ ನಾಸೀರ್ ಪಾಷ-ಫಸಿಯಾ ಬಾನು ದಂಪತಿಯ ಪುತ್ರ ಫರ್ಹಾನ್ (೧೨) ಸಾವನ್ನಪ್ಪಿದ ಬಾಲಕ. ೭ನೇ ತರಗತಿಯ ವಿದ್ಯಾರ್ಥಿ ಫರ್ಹಾನ್ ರಂಜಾನ್ ಹಬ್ಬಕ್ಕೆಂದು ಶನಿವಾರಸಂತೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದ.
(ಮೊದಲ ಪುಟದಿಂದ) ಶನಿವಾರ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ಮಾವನ ಜೊತೆ ಸಂಜೆಯವರೆಗೂ ಕಾಲ ಕಳೆದು, ೫ ಗಂಟೆಯ ನಂತರ ಮಾವನ ಮಗ ಸಮೀರ್ ಜೊತೆ ಹೊಳೆಯ ಕಡೆಗೆ ಆಟವಾಡಲೆಂದು ತೆರಳಿದ್ದು, ಈಜಾಡುವ ಸಂದರ್ಭ ಫರ್ಹಾನ್ ನೀರಿನಲ್ಲಿ ಮುಳುಗಿದ್ದು, ಸಮೀರ್ ಮಾತ್ರ ಮನೆಗೆ ಹಿಂತಿರುಗಿದ್ದ.
ನAತರ ಶನಿವಾರಸಂತೆಗೆ ಧಾವಿಸಿದ ನಾಸೀರ್ ಪಾಷ ಸಮೀರ್‌ನನ್ನು ವಿಚಾರಿಸಿದಾಗ ಸಮೀರ್ ಈಜಾಡಲು ಹೋಗಿ ಫರ್ಹಾನ್ ನೀರಿನಲ್ಲಿ ಮುಳುಗಿದ ವಿಚಾರ ತಿಳಿಸಿದ್ದಾನೆ. ರಾತ್ರಿ ೧೧.೩೦ಕ್ಕೆ ಗ್ರಾಮಸ್ಥರ ಜೊತೆ ಹೊಳೆಯ ಬಳಿ ತೆರಳಿ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯ ಗೇಟ್ ವಾಲ್‌ಅನ್ನು ತೆರವುಗೊಳಿಸಿ, ನೀರನ್ನು ಖಾಲಿ ಮಾಡಿಸಿ ಬಾಲಕ ಫರ್ಹಾನನ ಮೃತದೇಹವನ್ನು ತೆಗೆಯಲಾಯಿತು. ಹೊಳೆಯಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮಗ ಮೃತಪಟ್ಟಿರುವುದಾಗಿ ತಂದೆ ನಾಸೀರ್ ಪಾಷ ಭಾನುವಾರ ಬೆಳಗ್ಗಿನ ಜಾವ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.