ಕುಶಾಲನಗರ, ಮೇ ೭: ಮಠ ಮಂದಿರಗಳಲ್ಲಿ ಮಾತ್ರ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಜೋಡಿ ಬಸವೇಶ್ವರಸ್ವಾಮಿ ದೇವಾಲಯ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭಿಷೇಕ ಕಾರ್ಯಕ್ರಮದ ವೇದಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಮಕ್ಕಳಿಗೆ ಸಂಸ್ಕಾರ ಜೀವನದ ಮೌಲ್ಯಗಳ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಸಂಸ್ಕಾರ ಮತ್ತು ನಾಗರಿಕತೆ ಯಾವುದೇ ದೇಶವನ್ನು ಪ್ರತಿನಿಧಿಸುತ್ತದೆ ಹೊರತು ಆರ್ಥಿಕತೆ ಅಲ್ಲ ಎಂದು ಹೇಳಿದರು. ಧಾರ್ಮಿಕತೆ ಇತಿಹಾಸ ಹೊಂದಿದ ದೇಶ ಭಾರತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳ ಬೇಕಾಗಿದೆ. ಪರಂಪರೆ ಸಂಸ್ಕೃತಿ ಮೌಲ್ಯಗಳನ್ನು ನಿರಂತರವಾಗಿ ಯುವ ಪೀಳಿಗೆಗೆ ಜೀವನ ಮೌಲ್ಯ ನೆನಪಿಸುವ ಕೆಲಸವಾಗಬೇಕು ಎಂದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆಯ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ ಶುಭ ಹಾರೈಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ದೇವಸ್ಥಾನ ಕಟ್ಟಡ ಮಾರ್ಗದರ್ಶಕ ಬಿ.ಆರ್ ಉಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉದ್ಯಮಿ ಎಸ್ಎಲ್ಎನ್ ವಿಶ್ವನಾಥ್, ಪಂಚಾಯಿತಿ ಸದಸ್ಯರಾದ ಎಂ.ಕೆ. ಪ್ರವೀಣ್ ಕುಮಾರ್, ಎಂ.ಪಿ. ಶಿವಪ್ಪ, ರುಕ್ಮಿಣಿ, ಗಂಗಮ್ಮ, ಸರ್ವಮಂಗಳ, ಸ್ಥಳದಾನಿಗಳಾದ ಶಿವಮ್ಮ ಪುಟ್ಟಬಸಪ್ಪ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಸತೀಶ್ ಕುಂದರ್, ವಿನೋದ್, ನಂದಕುಮಾರ್ ಮತ್ತಿತರ ಪ್ರಮುಖರು ಇದ್ದರು.
ಸಮಾರಂಭಕ್ಕೂ ಮುನ್ನ ವೇದಬ್ರಹ್ಮ ಕಾರಣಿಕ ನರಹರಿ ಶರ್ಮ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭಿಷೇಕ ಕಾರ್ಯಗಳು ನಡೆದವು. ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೂರುದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರಗಿದವು. ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿತು.