ಸಿದ್ದಾಪುರ, ಮೇ ೭: ಸ್ನಾನಕ್ಕೆ ತೆರಳಿದ ಬಾಲಕನೋರ್ವ ಕಾವೇರಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಬರಡಿ ಗ್ರಾಮದಲ್ಲಿ ನಡೆದಿದೆ. ಬರಡಿ ಗ್ರಾಮದ ನಿವಾಸಿ ಮಣಿ ಎಂಬವರ ಪುತ್ರ ವಿಪಿನ್ ಮೃತ ಬಾಲಕ.
ವಿಪಿನ್ ಸೇರಿದಂತೆ ನಾಲ್ವರು ಬರಡಿ ಸಮೀಪದ ಕಾವೇರಿ ನದಿಗೆ ಸ್ನಾನ ಮಾಡಲು ತೆರಳಿದ್ದರು. ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿದ ವಿಪಿನ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ. ನೀರಿನಲ್ಲಿ ಮುಳುಗಿದ್ದ ವಿಪಿನ್ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ನಂತರ ಮರಳು ತೆಗೆಯುವ ತೆಪ್ಪದ ಮುಖಾಂತರ ಹುಡುಕಾಡಿದಾಗ ಅನತಿದೂರದಲ್ಲಿ ಮೃತದೇಹ ಪತ್ತೆಯಾಯಿತು.
ಮೃತ ವಿಪಿನ್ ಭಾನುವಾರದಂದು ತನ್ನ ಹುಟ್ಟುಹಬ್ಬ ಆಚರಿಸುವ ನಿಟ್ಟಿನಲ್ಲಿ ಸ್ನಾನದ ಬಳಿಕ ಹೊಸಬಟ್ಟೆ ಖರೀದಿಸಲೆಂದು ಪಟ್ಟಣಕ್ಕೆ ತೆರಳುವುದಾಗಿ ಸ್ನೇಹಿತರೊಂದಿಗೆ ತಿಳಿಸಿದ್ದ ಎನ್ನಲಾಗಿದೆ. ವಿಪಿನ್ ಪೋಷಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಪಿನ್ ತಂದೆ-ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.